ಬಿಜೆಪಿಯ ಅಪಪ್ರಚಾರ ಸೋಲಿಗೆ ಮುಖ್ಯ ಕಾರಣ ; ವಿನಯಕುಮಾರ್ ಸೊರಕೆ

Spread the love

ಬಿಜೆಪಿಯ ಅಪಪ್ರಚಾರ ಸೋಲಿಗೆ ಮುಖ್ಯ ಕಾರಣ ; ವಿನಯಕುಮಾರ್ ಸೊರಕೆ

ಪಡುಬಿದ್ರಿ: ‘ಬಿಜೆಪಿ ನಡೆಸಿದ ಅಪಪ್ರಚಾರವೇ ನನ್ನ ಸೋಲಿಗೆ ಮುಖ್ಯ ಕಾರಣ’ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಕಾಪು ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಬುಧವಾರ ಉಚ್ಚಿಲ- ಮೂಳೂರು ತುಂಬೆ ಕರ್ಕೇರ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ನಮಗೆ ಸೋಲಾಗಿದ್ದರೂ ನಂತರದಲ್ಲಿ ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆಗೆ ಸಹಕಾರಿಯಾಗಿದೆ. ರಾಜ್ಯದಲ್ಲಿ ನಮ್ಮದೇ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದಿದ್ದು, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬೇಕಿಲ್ಲ. ಕಾರ್ಯಕರ್ತರು ನಿರಾಶರಾಗದೆ, ಪಕ್ಷ ಸಂಘಟನೆಯಲ್ಲಿ ನಿರಂತರ ಕೈಜೋಡಿಸಬೇಕು’ ಎಂದು ವಿನಂತಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಉಂಟಾದ ಸೋಲಿನಿಂದ ಕಂಗೆಡದೇ, ಕ್ಷೇತ್ರದಲ್ಲಿದ್ದುಕೊಂಡು ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತೇನೆ. ಶಾಸಕನಾಗಿಲ್ಲದಿದ್ದರೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಆಡಳಿತಕ್ಕೆ ಬಂದಿರುವುದರಿಂದ ಹಿಂದಿನ ಎಲ್ಲಾ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿ, ಪಕ್ಷಕ್ಕೆ ಆಗಿರುವ ಸೋಲು ವೈಯಕ್ತಿಕವಾಗಿ ನಮಗೆಲ್ಲರಿಗೂ ಆಗಿರುವ ಸೋಲಾಗಿದೆ. ಸೋತೆವು ಎಂದು ನಿರಾಶೆಯಿಂದ ಕುಳಿತುಕೊಳ್ಳದೇ ನಮ್ಮಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ಪಕ್ಷ ಸಂಘಟನೆಗೆ ಪೂರಕವಾಗಿ ನಾವೆಲ್ಲರೂ ಜೊತೆ ಸೇರಿ ಕೆಲಸ ಮಾಡಬೇಕಿದೆ ಎಂದರು.

ಎಐಸಿಸಿ ಸದಸ್ಯ ಅಮೃತ್ ಶೆಣೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಕೋಟ್ಯಾನ್, ಉಸ್ತುವಾರಿ ಅಶೋಕ್ ಕುಮಾರ್ ಕೊಡವೂರು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಇಂಟಕ್ ಜಿಲ್ಲಾಧ್ಯಕ್ಷ ಗಣೇಶ್ ಕೋಟ್ಯಾನ್, ಪುರಸಭಾ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಎಚ್. ಉಸ್ಮಾನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಪ್ರಮುಖರಾದ ಇಗ್ನೇಷಿಯಸ್ ಡಿಸೋಜ, ವಿನಯ ಬಲ್ಲಾಳ್, ದೀಪಕ್ ಕುಮಾರ್ ಎರ್ಮಾಳ್, ಎಚ್. ಅಬ್ದುಲ್ಲಾ, ಪ್ರಭಾವತಿ ಸಾಲ್ಯಾನ್, ಕಿಶೋರ್ ಕುಮಾರ್, ಮೆಲ್ವಿನ್ ಡಿಸೋಜ ಇದ್ದರು.

ಅಧ್ಯಕ್ಷತೆ ವಹಿಸಿದ್ದ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಜೆ.ಶೆಟ್ಟಿ ಸ್ವಾಗತಿಸಿದರು. ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಜೀಜ್ ವಂದಿಸಿದರು. ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಮೀರ್ ಕಾಪು ನಿರೂಪಿಸಿದರು.


Spread the love