ಬಿರ್ಕನಕಟ್ಟೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಬಿರ್ಕನಕಟ್ಟೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದ್ದು ಈಗ ಇರುವ ಮಾರುಕಟ್ಟೆ ಅಂಗಡಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿ ಮಾರುಕಟ್ಟೆ ಕೆಲಸವನ್ನು ಪ್ರಾರಂಭಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಅವರು ಬಿರ್ಕನಕಟ್ಟೆ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ಮಾಡಿ ಮಾತನಾಡುತ್ತಿದ್ದರು. ಈಗ ಇರುವ ವಾರದ ಸಂತೆಯನ್ನು ಕೂಡಾ ಸ್ಥಳಾಂತರಗೊಳಿಸಲಾಗುವುದು ಎಂದರು.
ಇಲ್ಲಿ ಡ್ರೈನೇಜ್ ನೀರು ಹರಿಯುತ್ತಿದ್ದು ಇದಕ್ಕೆ ವ್ಯವಸ್ಥಿತವಾಗಿ ಪರಿಹಾರ ನೀಡಬೇಕು. ಮಳೆ ನೀರು ಮತ್ತು ಮಲಿನ ನೀರು ಸರಾಗವಾಗಿ ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸುಸಜ್ಜಿತ ಮಾರುಕಟ್ಟೆ ಆದಲ್ಲಿ ಕೋಳಿಮಾರಾಟ, ಮಾಂಸ ಮತ್ತು ಮೀನು ಮಾರಾಟಕ್ಕೆ ಪ್ರತ್ಯೇಕ ಅಂಗಡಿಗಳನ್ನು ಕಟ್ಟಿಕೊಡಲಾಗುವುದು. ಅಂತೆಯೇ ವಾರದ ಸಂತೆಗೂ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದ ಅವರು ಇದಕ್ಕೆ ಅಂಗಡಿ ಮಾಲೀಕರು ಸಹಕರಿಸುವಂತೆ ಲೋಬೊ ಮನವಿ ಮಾಡಿದರು.
ಕೂಡಲೇ ಅಧಿಕಾರಿಗಳು ಮಾರುಕಟ್ಟೆಯ ಬಗ್ಗೆ ಸರ್ವೇ ಮಾಡಬೇಕು. ಇಲ್ಲಿ ನ್ಯಾಷನಲ್ ಹೈ ವೇ ಬರುತ್ತದೆ. ಅದರ ಸರ್ವೇ ಮಾಡಿ ನಿರ್ಮಾಣ ಮಾಡಬೇಕಾಗಿರುವ ಅಂಗಡಿಗಳ ಬಗ್ಗೆಯೂ ಅಂದಾಜು ಪತ್ರ ತಯಾರಿಸುವಂತೆ ಹೇಳಿದ ಶಾಸಕ ಜೆ.ಆರ್.ಲೋಬೊ ಇನ್ನೊಂದು ವಾರದಲ್ಲಿ ಪುನ ಇಲ್ಲಿಗೆ ಬಂದು ಸ್ಥಳ ಪರಿಶೀಲನೆ ಮಾಡುವುದಾಗಿ ಹೇಳಿದರು.
ಶಾಸಕರೊಂದಿಗೆ ಮಾಜಿ ಮೇಯರ್ ಅಬ್ದುಲ್ ಅಜೀಜ್, ಕೆ ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಡೆನ್ಸಿಲ್, ನೆಲ್ಸನ್, ಸ್ಟ್ಯಾನಿ ಅರ್ಲಾರಿಸ್, ಅಲ್ವಿನ್ ಪಾಯಸ್, ಮಂಗಳೂರು ಮಹಾನಗರ ಪಾಲಿಕೆ ಇಂಜಿನಿಯರ್ ಗಳು ಉಅಪಸ್ಥಿತರಿದ್ದರು.
ಕದ್ರಿಯಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಗೀತ ಕಾರಂಜಿ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಕದ್ರಿ ಉದ್ಯಾನ ವನದಲ್ಲಿ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಗೀತ ಕಾರಂಜಿ ನಿರ್ಮಾಣ ಮಾಡಲಾಗುತ್ತಿದ್ದು ಇನ್ನೂ ಹೆಚ್ಚುವರಿಯಾಗಿ 50 ಲಕ್ಷ ರೂಪಾಯಿಯನ್ನು ವಿನಿಯೋಗಿಸಲಾಗುವುದು ಎಂದು ಶಾಸಕರಾದ ಜೆ.ಆರ್.ಲೋಬೊ ತಿಳಿಸಿದರು.
ಅವರು ಕದ್ರಿಯಲ್ಲಿ ನಿರ್ಮಾಣವಾಗುತ್ತಿರುವ ಸಂಗೀತ ಕಾರಂಜಿಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕಾಮಗಾರಿಯನ್ನು ಸಂಪೂರ್ಣ ಮಾಡಿ ಜನವರಿ ತಿಂಗಳಲ್ಲಿ ಉದ್ಘಾಟನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಕೆಲಸವನ್ನು ಭರದಿಂದ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಂಬಂಧಪಟ್ಟ ಎಲ್ಲ ಕೆಲಸಗಳನ್ನೂ ಪೂರ್ಣಮಾಡುವಂತೆ ಹೇಳಿದ ಅವರು ಈ ಸಂಗೀತ ಕಾರಂಜಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಒದಗಿಸಬೇಕು. ಇದು ಮೈಸೂರಲ್ಲಿ ಇರುವ ಸಂಗೀತ ಕಾರಂಜಿಗಿಂತಲೂ ಚೆನ್ನಾಗಿ ಕಾಣಬೇಕು. ವಿದೇಶಿ ಪ್ರವಾಸಿಗರು ಕೂಡಾ ಇಲ್ಲಿಗೆ ಬರುವಂತೆ ಮಾಡಬೇಕು ಎಂದರು.
ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್, ಮೂಡ ಕಮಿಷನರ್ ಶ್ರೀಕಾಂತ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ರಾಧಾಕೃಷ್ಣ, ಅರುಣ್ ಕುವೆಲ್ಲೋ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಗುತ್ತಿಗೆದಾರ ಪ್ರಭಾಕರ್ ಯೆಯ್ಯಾಡಿ, ಮೋಹನ್ ಶೆಟ್ಟಿ, ನೆಲ್ಸನ್ ಮುಂತಾದವರಿದ್ದರು.