ಬಿಲ್ಲವ ಸಮುದಾಯದಲ್ಲಿ ಒಗ್ಗಟ್ಟಿಲ್ಲ: ರವಿಕುಮಾರ್ ಎಚ್. ಆರ್ ಕಳವಳ

Spread the love

ಬಿಲ್ಲವ ಸಮುದಾಯದಲ್ಲಿ ಒಗ್ಗಟ್ಟಿಲ್ಲ: ರವಿಕುಮಾರ್ ಎಚ್. ಆರ್ ಕಳವಳ

 
ಕುಂದಾಪುರ: ಸಾಕಷ್ಟು ಬಲಿಷ್ಠವಾಗಿದ್ದ ಬಿಲ್ಲವ ಸಮಾಜ 26 ಉಪಪಂಗಡಗಳಾಗಿ ಹರಿದು ಹಂಚಿ ಹೋಗಿದೆ. ಎಲ್ಲರೂ ಒಗ್ಗೂಡಿದರೆ ನಾವು ಇಡೀ ರಾಜ್ಯವನ್ನೇ ಆಳಬಹುದು. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಶ್ರೀ ಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್. ಆರ್ ಕಳವಳ ವ್ಯಕ್ತಪಡಿಸಿದರು.

ನಗರದ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ಜರುಗಿದ ಬಿಲ್ಲವ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇದರ 31 ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಮತ್ತು ವಿಶೇಷ ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಒಗ್ಗಟ್ಟಿನ ಕೊರತೆಯಿಂದಾಗಿ ಹಿಂದೆ 5-6 ಸಂಸದರನ್ನು ಪಡೆದಿದ್ದ ನಮ್ಮ ಸಮಾಜ ಇಂದು ರಾಜಕೀಯ ವೈಷಮ್ಯದಿಂದಾಗಿ ಒಬ್ಬರೂ ಸಂಸದರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಎಲ್ಲರೂ ರಾಜಕೀಯ ಬದಿಗೊತ್ತಿ ನಮ್ಮ ಸಮಾಜದ ಮುಖಂಡರು ಯಾವುದೇ ಪಕ್ಷದಲ್ಲಿದ್ದರೂ ನಾವು ಸಮಾಜದ ಪರವಾಗಿ ಅವರ ಜೊತೆ ನಿಲ್ಲಬೇಕು. ಪಕ್ಷಭೇದ ಮರೆತು ಒಗ್ಗಟ್ಟಾಗಿ. ಒಗ್ಗಟ್ಟಲ್ಲಿ ಬಲವಿದೆ ಎಂದರು.

ನಾರಾಯಣ ಗುರುಗಳು ಇಡೀ ಕೇರಳವನ್ನು ಸಂಚರಿಸಿ ಶಿಕ್ಷಣ ಕ್ರಾಂತಿ ಮಾಡಿದ್ದರಿಂದ ಇಂದು ಕೇರಳ ಶಿಕ್ಷಣದಲ್ಲಿ ಪ್ರಥಮ ಸ್ಥಾನದಲ್ಲಿದೆ. ಅವರ ಸಂಚಾರ ಕರಾವಳಿಗೂ ವ್ಯಾಪಿಸಿದ್ದರಿಂದ ಕರಾವಳಿಯೂ ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಯಿತು. ನಾರಾಯಣ ಗುರುಗಳ ಪ್ರಭಾವವೇ ಕರಾವಳಿಯ ಇಂದಿನ ಸಾಧನೆಗೆ ಕಾರಣ ಎಂದವರು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಸತತ 31 ವರ್ಷಗಳಿಂದ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಪೆÇ್ರೀತ್ಸಾಹಕ್ಕಾಗಿ ವಿದ್ಯಾರ್ಥಿ ವೇತನ ವಿತರಿಸುತ್ತಿದ್ದೇವೆ. ಕಳೆದ ಬಾರಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದ್ದು, ಈ ಬಾರಿ 187 ವಿದ್ಯಾರ್ಥಿಗಳಿಗೆ ಮಾತ್ರ ವಿತರಿಸಲು ಸಾಧ್ಯವಾಗಿದೆ. ನಮ್ಮ ಸಂಘವು ಆರ್ಥಿಕವಾಗಿ ಬಲಿಷ್ಠಗೊಂಡಿಲ್ಲ. ಕಾರಣಗಳು ಬೇರೆ ಬೇರೆ ಇರಬಹುದು. ಈ ಬಗ್ಗೆ ಚಿಂತನೆ ನಡೆಸಬೇಕು. ಸಮಾಜದ ಉನ್ನತಿಗಾಗಿ ವೈದ್ಯ, ಇಂಜಿನಿಯರ್ ಜೊತೆಗೆ ಸರ್ಕಾರಿ ಅಧಿಕಾರಿಗಳಾಗಿಯೂ ಸಮಾಜ ವಿದ್ಯಾರ್ಥಿಗಳು ಗುರುತಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಕೆ. ಪ್ರೇಮಾನಂದ, ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ, ಶಿವರಾಮ ಪೂಜಾರಿ ಬಸ್ರೂರು, ನಾರಾಯಣಗುರು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಗುಣರತ್ನ, ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷ ಯೋಗೇಶ್ ಪೂಜಾರಿ ಕೋಡಿ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಸುಮನಾ ಬಿದ್ಕಲ್‍ಕಟ್ಟೆ ಇದ್ದರು.

ಎಸ್‍ಎಸ್‍ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಸಮಾಜದ 187 ವಿದ್ಯಾರ್ಥಿಗಳಿಎ ವಿದ್ಯಾರ್ಥಿ ವೇತನ ವಿತರಿಸುವ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಮಹಿಳಾ ಘಟಕದ ಕಾರ್ಯದರ್ಶಿ ಗುಲಾಬಿ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ಪ್ರಸ್ತಾಪಿಸಿ ಸ್ವಾಗತಿಸಿದರು. ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಕಡ್ಗಿಮನೆ ವಂದಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.


Spread the love