ಬೀಡಿ ಕಾರ್ಮಿಕರಿಗೆ ಕನಿಷ್ಠಕೂಲಿ ಪಾವತಿಗೆ ಮಾಲಕರ ಒಪ್ಪಿಗೆ
ಮಂಗಳೂರು: ಬೀಡಿ ಕಾರ್ಮಿಕರಿಗೆ ಕನಿಷ್ಠಕೂಲಿ ರೂಪಾಯಿ 210 ಹಾಗೂ ತುಟ್ಟಿಭತ್ತೆ ರೂಪಾಯಿ 10.52 ಸೇರಿ ಒಟ್ಟು ಸಾವಿರ ಬೀಡಿಗಳಿಗೆ ರೂಪಾಯಿ 220.52ನ್ನು 2018 ಎಪ್ರಿಲ್ ಒಂದರಿಂದ ಪಾವತಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಬೀಡಿ ಮಾಲಕರುಗಳು ಸುಮಾರು ಎರಡು ತಿಂಗಳುಗಳು ಕಳೆಯುತ್ತಿದ್ದರೂ ಇದುವರೆಗೆ ಕಾರ್ಮಿಕರಿಗೆ ಪಾವತಿಸಿಲ್ಲ. ಈ ಬಗ್ಗೆ ಬೀಡಿ ಮಾಲಕರನ್ನು ಎಐಟಿಯುಸಿ ನೇತೃತ್ವದ ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ನ ಉನ್ನತ ಮಟ್ಟದ ನಿಯೋಗ ಇಂದು ಭೇಟಿಯಾಗಿ ತಕ್ಷಣ ಪಾವತಿಸಬೇಕೆಂದು ಅಹವಾಲು ಸಲ್ಲಿಸಿತು. ಎಐಟಿಯುಸಿ ನಿಯೋಗದ ಮನವಿಗೆ ಸ್ಪಂದಿಸಿದ ಮಾಲಕರು ಕನಿಷ್ಠಕೂಲಿ ಮತ್ತು ತುಟ್ಟಿಭತ್ತೆಯನ್ನು ಕಾರ್ಮಿಕರಿಗೆ ಕೂಡಲೇ ಪಾವತಿಸುವುದಾಗಿ ಒಪ್ಪಿರುತ್ತಾರೆ ಎಂದು ಎಸ್. ಕೆ. ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಪ್ರಧಾನ ಕಾರ್ಯದರ್ಶಿ ವಿ. ಎಸ್. ಬೇರಿಂಜ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರನ್ನು ನಿಯೋಗ ಭೇಟಿಯಾಗಿ ಬೀಡಿ ಕಾರ್ಮಿಕರಿಗೆ ಸದ್ರಿ ಮೊತ್ತ ಪಾವತಿಸುವಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ವಿನಂತಿಸಿತು. ಬೀಡಿ ಮಾಲಕರುಗಳಿಗೆ ಈ ಬಗ್ಗೆ ಸೂಚಿಸುವುದಾಗಿ ಸಹಾಯಕ ಕಾರ್ಮಿಕರು ಭರವಸೆ ನೀಡಿದರು. ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಮಾನ್ಯ ಉಪ ಕಾರ್ಮಿಕ ಆಯುಕ್ತರಿಗೂ ಮನವಿ ಸಲ್ಲಿಸಲಾಯಿತು.
ಫೆಡರೇಶನ್ ನ ನಿಯೋಗದಲ್ಲಿ ಅಧ್ಯಕ್ಷರಾದ ಕೆ.ವಿ ಭಟ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಹೆಚ್. ವಿ ರಾವ್, ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ ವಿ. ಎಸ್. ಬೇರಿಂಜ, ಫೆಡರೇಶನ್ ನ ಪದಾಧಿಕಾರಿಗಳಾಗಿರುವ ಬಿ. ಶೇಖರ್, ಸುರೇಶ್ ಕುಮಾರ್ ಬಂಟ್ವಾಳ್, ಎಂ. ಕರುಣಾಕರ್, ತಿಮ್ಮಪ್ಪ ಕಾವೂರು, ಸುಲೋಚನ ಕವತ್ತಾರು, ಚಿತ್ರಾಕ್ಷಿ ಕುಂಜತ್ತ್ ಬೈಲು ಉಪಸ್ಥಿತರಿದ್ದರು.