ಬೆಂಕಿಗೆ ತುತ್ತಾದ ಕೇಂದ್ರ ಮಾರುಕಟ್ಟೆ ಅಂಗಡಿಗಳಿಗೆ ಶಾಸಕ ಕಾಮತ್ ಭೇಟಿ
ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಶುಕ್ರವಾರ ಕೇಂದ್ರ ಮಾರುಕಟ್ಟೆಗೆ ಭೇಟಿ ನೀಡಿ ಬೆಂಕಿ ಅವಘಡ ಸಂಭವಿಸಿದ ಮಳಿಗೆಗಳನ್ನು ಪರಿಶೀಲಿಸಿದರು. ನಂತರ ಈ ಬಗ್ಗೆ ಮಾತನಾಡಿದ ಶಾಸಕ ಕಾಮತ್ ಅವರು ಸಬ್ ಮೀಟರ್ ಗಳಿಂದ ಹೊರಡುವ ವಿದ್ಯುತ್ ತಂತಿಗಳಿಂದ ಬೆಂಕಿ ಉಂಟಾಗಿ ಕೆಲವು ಮಳಿಗೆಗಳ ಇಲೆಕ್ಟ್ರಿಕಲ್ ವೈಯರ್ಸ್ ಮತ್ತು ಸಲಕರಣೆಗಳು ಹಾಳಾಗಿ ನಷ್ಟ ಸಂಭವಿಸಿದೆ.
ಹಾಗೆ ಅಂಗಡಿಗಳ ಚಾವಣಿಗಳಿಗೆ ಬೆಂಕಿ ತಗುಲಿ ಸೊತ್ತು ನಾಶವಾಗಿವೆ. ತಾನು ಈ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದರೂ ಅಂಗಡಿಗಳ ಮಾಲೀಕರೊಂದಿಗೆ ಮಾತನಾಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಹಾಗೆ ಇವತ್ತು ಇಲ್ಲಿ ಪರಿಶೀಲಿಸಿದಾಗ ರಿಪೇರಿ ಕೆಲಸಗಳು ಆಗಿಲ್ಲ ಎನ್ನುವುದು ಗಮನಕ್ಕೆ ಬಂತು. ಆದ್ದರಿಂದ ತಕ್ಷಣ ಮೆಸ್ಕಾಂ ಇಂಜಿನಿಯರ್ಸ್ ಮತ್ತು ಪಾಲಿಕೆಯ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ರಿಪೇರಿ ಕಾಮಗಾರಿ ಆರಂಭಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಉದ್ಭವಿಸಬಾರದು ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಶಾಸಕರೊಂದಿಗೆ ಪಾಲಿಕೆಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ರೂಪಾ ಡಿ ಬಂಗೇರ, ಪೂರ್ಣಿಮಾ, ಬಿಜೆಪಿ ಮುಖಂಡರಾದ ಭಾಸ್ಕರಚಂದ್ರ ಶೆಟ್ಟಿ, ವಸಂತ ಜೆ ಪೂಜಾರಿ, ಉದ್ಯಮಿ ರವೀಂದ್ರ ನಿಕಂ ಹಾಗೂ ವ್ಯಾಪಾರಸ್ಥರು ಉಪಸ್ಥಿತರಿದ್ದರು