ಬೆಂಗಳೂರು : ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕ ಗೊಂಡಿರುವ ಉಡುಪಿ ಶಾಸಕ ಶ್ರೀ ಪ್ರಮೋದ್ ಮಧ್ವರಾಜ್ ಅವರು ವಿಧಾನ ಸೌಧದ ಮುಖ್ಯಮಂತ್ರಿಯವರ ಕೊಠಡಿಯಲ್ಲಿ ಸೋಮವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಈ ಸಂದರ್ಭದಲ್ಲಿ ಶಾಸಕ ಶ್ರೀ ಪ್ರಮೋದ್ ಮಧ್ವರಾಜ್ ಅವರಿಗೆ ಅಧಿಕಾರ ಹಾಗೂ ಗೌಪ್ಯತಾ ಪ್ರಮಾಣ ವಚನವನ್ನು ಬೋಧಿಸಿದರು.
ಶ್ರೀ ಪ್ರಮೋದ್ ಮಧ್ವರಾಜ್ ಅವರು ಕನ್ನಡ ಭಾಷೆಯಲ್ಲಿ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.
ಉನ್ನತ ಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಟಿ. ಬಿ. ಜಯಚಂದ್ರ, ಲೋಕೋಪಯೋಗಿ ಸಚಿವ ಡಾ ಹೆಚ್. ಸಿ. ಮಹದೇವಪ್ಪ, ಸಹಕಾರ ಮತ್ತು ಸಕ್ಕರೆ ಸಚಿವ ಶ್ರೀ ಹೆಚ್. ಎಸ್. ಮಹದೇವ ಪ್ರಸಾದ್, ಮೂಲಭೂತ ಸೌಲಭ್ಯ ಮತ್ತು ಹಜ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಶ್ರೀ ಆರ್. ರೋಷನ್ ಬೇಗ್, ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಹೆಚ್. ಎಂ. ರೇವಣ್ಣ ಮತ್ತು ಶ್ರೀ ವಿ. ಎಸ್. ಉಗ್ರಪ್ಪ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಕೌಶಿಕ್ ಮುಖರ್ಜಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಡಿ. ಎನ್. ನರಸಿಂಹರಾಜು, ಮುಖ್ಯಮಂತ್ರಿಯವರ ಕಾರ್ಯದರ್ಶಿ ಶ್ರೀ ತುಷಾರ್ ಗಿರಿನಾಥ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.
ಶ್ರೀ ಪ್ರಮೋದ್ ಮಧ್ವರಾಜ್ ಅವರ ಸೇರ್ಪಡೆಯಿಂದ ರಾಜ್ಯ ಸರ್ಕಾರದಲ್ಲಿನ ಸಂಸದೀಯ ಕಾರ್ಯದರ್ಶಿಗಳ ಸಂಖ್ಯೆ ಹನ್ನೊಂದಕ್ಕೆ ಏರಿದೆ.