ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಅಣ್ಣಾಮಲೈ ಅಧಿಕಾರ ಸ್ವೀಕಾರ
ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಇಂದು ಅಣ್ಣಾಮಲೈ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಸೌತ್ ಎಂಡ್ ಸರ್ಕಲ್ ನಲ್ಲಿರುವ ಡಿಸಿಪಿ ಕಚೇರಿಯಲ್ಲಿ ಹಿಂದಿನ ಡಿಸಿಪಿ ಡಾ ಶರಣಪ್ಪ ಶರಣಪ್ಪರಿಂದ ಅಣ್ಣಾಮಲೈ ಅಧಿಕಾರ ಸ್ವೀಕಾರ ಮಾಡಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಕಳೆದ ವಾರವೇ ನನಗೆ ಟ್ರಾನ್ಸಫರ್ ಆರ್ಡರ್ ನನಗೆ ಬಂತು. ಮಂಗಳವಾರ ಮೂಮೆಂಟ್ ಆರ್ಡರ್ ಬಂತು. ನಾನು ಪೊಲೀಸ್ ಥಿಯರಿಯಲ್ಲಿ ನಂಬುತ್ತೇನೆ. ಈ ಹಿಂದೆ ಕೆಲಸ ಮಾಡಿದ ಡಿಸಿಪಿ ಅವರಿಗೆ ಸ್ವಲ್ಪ ಸಮಯ ಕೊಡಬೇಕಿತ್ತು. ಹಾಗಾಗಿ ನಾನು ಒಂದು ವಾರ ಲೇಟ್ ಆಗಿ ಬಂದಿದ್ದೇನೆ ಎಂದರು.
ಬೆಂಗಳೂರಿಗೆ ಬಂದ ನಂತರ ಕೆಲವೊಂದು ಪ್ರಕ್ರಿಯೆ ಇತ್ತು. ಸಬ್ ಡಿವಿಶನ್ ಬಗ್ಗೆ ಪರಿಚಯಿಸಿಕೊಟ್ಟರು. ಸದ್ಯ ಮಾಧ್ಯಮದವರು ನನಗೆ ಸಹಕಾರ ನೀಡಿ ತಮ್ಮ ವಾಟ್ಸಾಪ್ ಗ್ರೂಪಿನಲ್ಲಿ ಸೇರಿಸಿಕೊಳ್ಳಿ. ಜನರಿಗಾಗಿ ನೀವು ನಮಗೆ ಸಹಕಾರ ನೀಡಬೇಕು. ನಾವು ನಿಮಗೆ ಸಹಕಾರ ನೀಡುತ್ತೇನೆ. ನನಗೆ ಇಲ್ಲಿ ಕೆಲವರು ಮಾತ್ರ ಪರಿಚಯ ಇದ್ದಾರೆ. ನಾನು ಟಿವಿಯಲ್ಲಿ ಬರುವ ದೊಡ್ಡ ಮನುಷ್ಯ ಅಲ್ಲ. ನಾನು ಲೋಕಿ ಮನುಷ್ಯ. ಆದರೆ ಟಿವಿಯಲ್ಲಿ ಬಂದು ಬೈಟ್ ಕೊಡಲೇಬೇಕೆಂದರೆ ನಾನು ಬರುತ್ತೇನೆ. ಯಾವುದೇ ಚಿಕ್ಕ ಸುದ್ದಿ ಇದ್ದರೂ ಅದು ದೊಡ್ಡ ಸುದ್ದಿನೇ ಎಂದು ಅಣ್ಣಾಮಲೈ ಹೇಳಿದರು.
ಸದ್ಯ ನಾನು ಈಗ ಮಗುವಾಗಿದ್ದೇನೆ. ಮಗು ಹುಟ್ಟಿದ್ದಾಗ ಹೇಗೆ ಇರುತ್ತೋ ಹಾಗೇ ಇದ್ದೇನೆ. ನನಗೆ ಬೆಂಗಳೂರು ಬಗ್ಗೆ ಏನೂ ಗೊತ್ತಿಲ್ಲ. ಅಲ್ಲದೇ ನನಗೆ ಬೆಂಗಳೂರು ಏರಿಯಾಗಳ ಹೆಸರು ಗೊತ್ತಿಲ್ಲ. ಒಂದು ವಾರದಲ್ಲಿ ಬೆಂಗಳೂರಿನ ಬಗ್ಗೆ ತಿಳಿದುಕೊಳ್ಳುತ್ತೇನೆ. ಶರಣಪ್ಪ ಸರ್ ನಂತರ ನಾನು ಅಧಿಕಾರ ಸ್ವೀಕರಿಸುತ್ತಿರುವುದು ನನಗೆ ಖುಷಿ ಇದೆ. ಈ ಹಿಂದೆ ನಾನು ಅವರ ಕೆಳಗೆ ಕೆಲಸ ಮಾಡಿದ್ದೇನೆ. ಅವರು ತುಂಬಾ ಒಳ್ಳೆಯ ವ್ಯಕ್ತಿ. ಬೆಂಗಳೂರು ದೇಶದಲ್ಲಿನ ಹೆಮ್ಮೆಯ ನಗರ ಇಲ್ಲಿ ಒಳ್ಳೆಯ ಪೊಲೀಸಿಂಗ್ ಆಗುತ್ತಿದೆ. ನಾನು ಇದನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಅಣ್ಣಾಮಲೈ ಮಾತನಾಡಿದ್ದರು.
ನಾನು ಇಲ್ಲಿ ಏನೂ ಅಂದುಕೊಂಡು ಬಂದಿಲ್ಲ. ನಿಜವಾಗಲೂ ಹೇಳಬೇಕೆಂದರೆ ನಾನು ಸಂಪೂರ್ಣ ಬ್ಲಾಂಕ್ ಆಗಿದ್ದೇನೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಒಂದು ವಾರದವರೆಗೂ ನನಗೆ ಟೈಂ ಬೇಕು. ಮೊದಲು ಬೆಂಗಳೂರಿನಲ್ಲಿ ಏನೂ ಆಗುತ್ತಿದೆ ಎಂದು ತಿಳಿದುಕೊಳ್ಳಬೇಕು. ನಂತರ ನಾವು ಎಲ್ಲಿ ನಮ್ಮ ಕೊಡುಗೆ ನೀಡಬೇಕು. ಎಲ್ಲಿ ನಮ್ಮ ಅವಶ್ಯಕತೆ ಇದೆ ಎಂಬುದನ್ನು ನೋಡಿಕೊಂಡು ಕೆಲಸ ಮಾಡುತ್ತೇನೆ ಎಂದು ಅಣ್ಣಾಮಲೈ ಹೇಳಿದರು.
ಕೃಪೆ: ಪಬ್ಲಿಕ್ ಟಿವಿ