ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡನೇ ಬಾರಿ ಶನಿವಾರ ಬೆಳಗ್ಗೆ ಸಚಿವರು, ಅಧಿಕಾರಿಗಳ ಜೊತೆ ಬಸ್ನಲ್ಲಿ ಬೆಂಗಳೂರು ಪ್ರದಕ್ಷಿಣೆ ಹಾಕಿದರು. ರಾಜ ಕಾಲುವೆ ವೀಕ್ಷಿಸಿದ ಸಿಎಂಗೆ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಸ್ಥಳೀಯರು ವಿವರಿಸಿದರು. ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೃಷ್ಣಾದಿಂದ ಬಸ್ನಲ್ಲಿ ಹೊರಟ ಸಿಎಂ ನಗರ ಪ್ರದಕ್ಷಿಣೆಗೆ ಸಂಸದ ವೀರಪ್ಪ ಮೊಯ್ಲಿ, ಸಚಿವ ರಾಮಲಿಂಗಾರೆಡ್ಡಿ, ರೋಷನ್ಬೇಗ್, ಶಾಸಕ ಪ್ರಿಯಾಕೃಷ್ಣ, ಮುನಿರತ್ನ ಸಾಥ್ ನೀಡಿದರು. ಯಲಹಂಕ ಬಳಿಯ ಯೋಗೇಶ್ ನಗರದ ರಾಜಾ ಕಾಲುವೆ ವೀಕ್ಷಿಸಿದ ಅವರು ಹೂಳು ಎತ್ತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಿಎಂ ಭೇಟಿ ಹಿನ್ನೆಲೆಯಲ್ಲಿ ಜಮಾಯಿಸಿದ್ದ ಸ್ಥಳೀಯರು ಅನೇಕ ಪ್ರಶ್ನೆಗಳನ್ನು ಕೇಳಿ ಮುಜುಗರಕ್ಕೀಡು ಮಾಡಿದ ಪ್ರಸಂಗ ಕಂಡುಬಂತು. ಅಧಿಕಾರಿಗಳು ಮೂರು ಬಸ್ಗಳಲ್ಲಿ ಸಿಎಂಗೆ ಸಾಥ್ ನೀಡಿದರು. ಕೆಲವು ಕಡೆ ಸಿಎಂರಿಂದ ಮುಜುಗರಕ್ಕೀಡಾಗುವುದನ್ನು ತಪ್ಪಿಸಿಕೊಳ್ಳಲು ಹಿರಿಯ ಅಧಿಕಾರಿಗಳೇ ಮಾಯವಾಗಿರುವುದೂ ಕಂಡುಬಂತು.