ಬೆಳೆ ಸಮೀಕ್ಷೆಗೆ ಪಂಚಾಯತ್ ಪಿಡಿಒ, ವಿಎ ಬಳಕೆ- ಬಿಜೆಪಿಯಿಂದ ಪ್ರತಿಭಟನೆ

Spread the love

ಬೆಳೆ ಸಮೀಕ್ಷೆಗೆ ಪಂಚಾಯತ್ ಪಿಡಿಒ, ವಿಎ ಬಳಕೆ- ಬಿಜೆಪಿಯಿಂದ ಪ್ರತಿಭಟನೆ

ಉಡುಪಿ: ರಾಜ್ಯ ಸರ್ಕಾರದ ಬೆಳೆ ಸಮೀಕ್ಷೆ ಯೋಜನೆಯ ಹಿಂದೆ ಬಡ ರೈತರ ಸಣ್ಣಪುಟ್ಟ ಹಿಡುವಳಿ, ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರ ಅಡಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆರೋಪಿಸಿದ್ದಾರೆ.

  ಅವರು ಜಿಲ್ಲಾ ಬಿಜೆಪಿಯ ಪಂಚಾಯತ್ ರಾಜ್ ಪ್ರಕೋಷ್ಠದ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ರಾಜ್ಯ ಸರ್ಕಾರವು ಬೆಳೆ ಸಮೀಕ್ಷೆಗೆ ಪಂಚಾಯತ್ ಗಳ ಗ್ರಾಮ ಕರಣಿಕರನ್ನು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿರುವುದರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.

  ಹಿಂದೆ ಉಳುವವನೇ ಭೂಮಿದೊಡೆಯ ಎಂಬ ಕಾನೂನಿನಂತೆ ರಾಜ್ಯದಲ್ಲಿ ಲಕ್ಷಾಂತರ ಮಂದಿ ಭೂಮಿಯನ್ನು ಪಡೆದಿದ್ದಾರೆ. ಆದರೇ ಇತ್ತೀಚೆಗೆ ಕಾರಣಾಂತರಗಳಿಂದ ಆ ಭೂಮಿಯಲ್ಲಿ ಕೃಷಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಈಗ ರಾಜ್ಯ ಸರ್ಕಾರ ಕೃಷಿ ಮಾಡದೇ ಹಡೀಲು ಬಿಟ್ಟಿರುವ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾಯ್ದೆಯನ್ನು ಜಾರಿಗೆ ತರುವುದಕ್ಕೆ ಸಿದ್ಧವಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ರಾಜ್ಯದಲ್ಲಿ ಹಡಿಲು ಬಿದ್ದಿರುವ ಭೂಮಿಯನ್ನು ಪತ್ತೆ ಮಾಡುವುದಕ್ಕೆ ಈ ಬೆಳೆ ಸಮೀಕ್ಷೆಯನ್ನು ಮಾಡಲಾಗುತ್ತಿದೆ. ಇದೊಂದು ಷಡ್ಯಂತ್ರವಾಗಿದ್ದು, ರೈತರು ಬೆಳೆಯತ್ತಿರುವ ಬೆಳೆಗಳ ಸಮೀಕ್ಷೆ ಇದಲ್ಲ ಎಂದವರು ಹೇಳಿದರು.

  ಸರ್ಕಾರ ಈ ಷಡ್ಯಂತ್ರವನ್ನು ಜಾರಿಗೆ ತರಲು ಪಂಚಾಯತ್ ಸಿಬ್ಬಂದಿಗಳನ್ನು ಬಳಸಿಕೊಳ್ಳುತ್ತಿದೆ. ಮೊದಲೇ ಪಂಚಾಯತ್ ಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಜನರ ಕೆಲಸಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ಅಂತಹ ಸಂದರ್ಭದಲ್ಲಿ ಸಿಬ್ಬಂದಿಗಳನ್ನು ತಿಂಗಳುಗಟ್ಟಲೇ ಬೆಳೆ ಸಮೀಕ್ಷೆಗೆ ಬಳಸಿದರೇ ಪಂಚಾಯತ್ ಆಡಳಿತವೇ ಸ್ಥಗಿತಗೊಳ್ಳಲಿದೆ. ಆದ್ದರಿಂದ ಸರ್ಕಾರ ತಕ್ಷಣ ಈ ಬೆಳೆ ಸಮೀಕ್ಷೆಗೆ ಪಂಚಾಯತ್ ಸಿಬ್ಬಂದಿಗಳ ನೇಮಕ ರದ್ದುಗೊಳಿಸಬೇಕು. ಇಲ್ಲದಿದ್ದರೇ ಮುಂದೆ ಆಹೋರಾತ್ರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದವರು ಎಚ್ಚರಿಸಿದರು.

ಇಂತಹ ಸಮೀಕ್ಷೆಗಳಿಗೆ ಸರ್ಕಾರ ಬೇಕಾದಷ್ಟು ಅನುದಾನ ಬಿಡುಗಡೆ, ನಿರುದ್ಯೋಗಿ ಯುವಜನರನ್ನು ಬಳಸಿಕೊಳ್ಳಬೇಕು, ಆದರೇ ರಾಜ್ಯ ಸರ್ಕಾರಕ್ಕೆ ಅಂತಹ ಸಾಮರ್ಥ್ಯ ಇಲ್ಲ ಎಂದು ಈಗ ಸಾಬೀತಾಗಿದೆ. ಹೋಗಲಿ, ಪಂಚಾಯತ್ ಸಿಬ್ಬಂದಿಗಳನ್ನು ಸಮೀಕ್ಷೆ ಬಳಸಿದ್ದೀರಿ, ಆದರೇ ಅವರು ಕಚೇರಿಯಲ್ಲಿ ಇಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಅವರು ವಾರದಲ್ಲಿ 3 ದಿನವಾದರೂ ಕಚೇರಿಯಲ್ಲಿರುವಂತೆ ಮಾಡಿ, ಜನರ ಕೆಲಸಗಳು ಮಾಡುವುದಕ್ಕೆ ಅವಕಾಶ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

  ಜಿಲ್ಲಾಧಿಕಾರಿ ಅವರು ಪಂಚಾಯತ್ ಸಿಬ್ಬಂದಿಗಳ ವಿಷಯದಲ್ಲಿ ತಾಲೂಕು – ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಿ ಇಲ್ಲದಿದ್ದರೇ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಯೊಳಗೆ ನುಗ್ಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

     ಪ್ರತಿಭಟನೆಯಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು , ಜಿ.ಪಂ.ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯರಾದ ಗೀತಾಂಜಲಿ ಸುವರ್ಣ, ಜ್ಯೋತಿ ಹರೀಶ್, ರೇಶ್ಮಾ ಉದಯ ಶೆಟ್ಟಿ, ಉದಯ ಕೋಟ್ಯಾನ್, ರಾಘವೇಂದ್ರ ಕಾಂಚನ್, ಶಶಿಕಾಂತ್ ಪಡುಬಿದ್ರಿ, ಶಿಲ್ಪ ಸುವರ್ಣ, ಸುಮಿತ್ ಶೆಟ್ಟಿ ಕೌಡೂರು, ಬಾಬು ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್, ಬಿಜೆಪಿ ನಾಯಕರಾದ  ಲಾಲಾಜಿ ಮೆಂಡನ್, ಸುರೇಶ್ ನಾಯಕ್, ಶ್ರೀಶ ನಾಯಕ್, ರಾಜೇಶ್ ಕಾವೇರಿ, ಯಶಪಾಲ್ ಸುವರ್ಣ, ಸುಪ್ರಸಾದ್ ಶೆಟ್ಟಿ, ಕಟಪಾಡಿ ಶಂಕರ ನಾಯಕ್, ರಶ್ಮಿತಾ ಬಾಲಕೃಷ್ಣ ಮುಂತಾದವರು ಭಾಗವಹಿಸಿದ್ದರು. ಪಂ.ರಾ.ಪ್ರಕೋಷ್ಟದ ಸಹಸಂಚಾಲಕ ಶ್ರೀಕಾಂತ ನಾಯಕ್ ಕಾರ್ಯಕ್ರಮ ನಿರೂಪಿಸಿದರು.


Spread the love