ಬೆಳ್ತಂಗಡಿ: ಕಾರೊಂದರ ಮೇಲೆ ಒಂಟಿ ಸಲಗ ದಾಳಿ
ಬೆಳ್ತಂಗಡಿ: ನೆರಿಯ-ಕಕ್ಕಿಂಜೆ ರಸ್ತೆಯಲ್ಲಿ ಓಡಾಟ ನಡೆಸಿದ ಒಂಟಿ ಸಲಗ ಕಾರೊಂದರ ಮೇಲೆ ದಾಳಿ ನಡೆಸಿದ ಘಟನೆ ಸೋಮವಾರ ರಾತ್ರಿಯ ವೆಳೆ ಸಂಭವಿಸಿದೆ.
ಆನೆ ಬರುವುದನ್ನು ನೋಡಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಕಾರಿನ ಬಳಿ ಬಂದ ಕಾಡಾನೆ ಕಾರಿನ ಮೇಲೆ ದಾಳಿ ನಡೆಸಿದೆ. ಕಾರಿನ ಮುಂಭಾಗವನ್ನು ಮೇಲಕ್ಕೆತ್ತಿದೆ. ಆನೆಯ ದಾಳಿಗೆ ಕಾರಿನಲ್ಲಿದ್ದವರಿಗೆ ಗಾಯವಾಗಿರುವ ಮಾಹಿತಿ ತಿಳಿದು ಬಂದಿದೆ. ಕಾರಿನಲ್ಲಿ ಒಟ್ಟು ಆರು ಮಂದಿ ಪ್ರಯಾಣಿಕರು ಇದ್ದರು.
ಸೋಮವಾರ ಬೆಳಗ್ಗಿನಿಂದಲೂ ಒಂಟಿ ಸಲಗ ತೋಟತ್ತಾಡಿ ಗ್ರಾಮದಲ್ಲಿ ತಿರುಗಾಟ ನಡೆಸಿರುವುದನ್ನು ಜನರು ಗಮನಿಸಿದ್ದರು. ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಕಜೆ ಪರಿಸರದಿಂದ ಆಗಮಿಸಿದ ಕಾಡಾನೆ ಹಳೆ ಕಕ್ಕಿಂಜೆ, ಅಂತರ ಬೈಲು ಮೂಲಕ ಪೆರ್ನಾಳೆ ಅರಣ್ಯದ ಕಡೆ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಸಾಗಿದೆ.
ಇಲ್ಲಿನ ಅಶೋಕ್ ಜೈನ್ ಎಂಬವರ ಮನೆಯ ಸಮೀಪದಿಂದಲೇ ಕಾಡಾನೆ ಸಂಚಾರ ನಡೆಸಿತ್ತು. ಇದೀಗ ಸಂಜೆಯ ವೇಳೆಗೆ ಆನೆ ರಸ್ತೆಯಲ್ಲಿಯೇ ಕಾಣಿಸಿಕೊಂಡು ವಾಹನದ ಮೇಲೆ ದಾಳಿ ನಡೆಸಿರುವುದು ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ಈ ಪರಿಸರದಲ್ಲಿ ಬೀಡು ಬಿಟ್ಟಿದ್ದೂ ಜನರು ಮನೆಯಿಂದ ಹೊರಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.