ಬೇಕರಿ, ಹಣ್ಣುಹಂಪಲು, ಬಾಟಲಿ ಕುಡಿಯುವ ನೀರಿನ ಘಟಕಗಳ ತಪಾಸಣೆಗೆ ಡಿಸಿ ಸೂಚನೆ
ಮ0ಗಳೂರು : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಆಹಾರ ತಯಾರಿಕಾ ಘಟಕಗಳನ್ನು ನಿರಂತರವಾಗಿ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ಸೂಚನೆ ನೀಡಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆಹಾರ ಸುರಕ್ಷತೆ ಕಾಯಿದೆಯ ಜಿಲ್ಲಾ ಮಟ್ಟದ ಚಾಲನಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಟಲಿ ಕುಡಿಯುವ ನೀರು ಸರಬರಾಜಿನ 16 ತಯಾರಿಕಾ ಘಟಕಗಳಿವೆ. ನೀರನ್ನು ಬಾಟಲಿಯಲ್ಲಿ ಸಂಗ್ರಹಿಸಿ ಮಾರಾಟ ಮಾಡುವ ಘಟಕಗಳು ಐಎಸ್ಐ ಪರವಾನಿಗೆ ಹೊಂದುವುದು ಕಡ್ಡಾಯವಾಗಿದೆ. ಐಎಸ್ಐ ಪರವಾನಿಗೆ ಇಲ್ಲದಿದ್ದರೆ ಸ್ಥಳೀಯ ನಗರ ಅಥವಾ ಗ್ರಾಮ ಪಂಚಾಯತ್ಗಳು ಲೈಸನ್ಸ್ ನೀಡುವಂತಿಲ್ಲ. ಈಗಾಗಲೇ ಐಎಸ್ಐ ಪರವಾನಿಗೆ ಇಲ್ಲದೇ ಕಾರ್ಯಾಚರಿಸುತ್ತಿರುವ ಬಾಟಲಿ ನೀರಿನ ಘಟಕಗಳಿಗೆ ನೀಡಲಾದ ಲೈಸನ್ಸ್ಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಈ ಸಂಬಂಧ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಎಲ್ಲಾ ಕುಡಿಯುವ ನೀರಿನ ಪ್ಯಾಕೇಜಿಂಗ್ ಘಟಕಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಬಾಟಲಿ ನೀರಿನ ಘಟಕಗಳನ್ನು ಆಹಾರ ಸುರಕ್ಷತೆ ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ನಡೆಸಿದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ನೀರಿನ ಸ್ಯಾಂಪಲ್ ಸಂಗ್ರಹಿಸಿ ಅದು ಕುಡಿಯಲು ಯೋಗ್ಯವಾಗಿದೆಯೇ ಹಾಗೂ ಬಾಟಲಿ ಪ್ಯಾಕೇಜಿಂಗ್ ಘಟಕ ಎಲ್ಲಾ ನಿಯಮಗಳನ್ನು ಪಾಲಿಸುತ್ತಿರುವ ಬಗ್ಗೆ ಮುಂದಿನ ಒಂದು ತಿಂಗಳೊಳಗೆ ಜಿಲ್ಲೆಯ ಎಲ್ಲಾ ಬಾಟಲಿ ನೀರಿನ ಘಟಕಗಳ ತಪಾಸಣೆ ನಡೆಸಿ ವರದಿ ನೀಡುವಂತೆ ಆಹಾರ ಸುರಕ್ಷತೆ ಅಂಕಿತ ಅಧಿಕಾರಿಗೆ ನಿರ್ದೇಶಿಸಿದರು.
ಫುಟ್ಪಾತ್ ತಿಂಡಿಸ್ಟಾಲ್ಗಳು, ಫಾಸ್ಟ್ ಫುಡ್ ಹೋಟೆಲ್ಗಳಲ್ಲಿ ದೊರಕುವ ತಿನಿಸುಗಳಲ್ಲಿ ವಿಪರೀತ ರಾಸಾಯನಿಕ ಕೆಮಿಕಲ್ಗಳನ್ನು ಬೆರಸುತ್ತಿರುವುದು ಕಂಡುಬರುತ್ತಿದೆ. ಇವುಗಳ ಬಗ್ಗೆ ನಿಗಾವಹಿಸಬೇಕು. ಫಾಸ್ಟ್ಫುಡ್ ಆಹಾರಗಳಲ್ಲಿ ವಿಪರೀತ ಬಣ್ಣ ಕಂಡುಬಂದರೆ ಅಂತಹವುಗಳನ್ನು ತಿನ್ನಬಾರದು. ಅಲ್ಲದೇ, ಸಾರ್ವಜನಿಕರಿಗೆ ಇಂತಹ ಕೆಮಿಕಲ್ ಅಂಶಗಳ ಬಗ್ಗೆ ಮತ್ತು ಆರೋಗ್ಯದ ಮೇಲೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಹಣ್ಣು ಹಂಪಲುಗಳ ಮೇಲೆ ರಾಸಾಯನಿಕ ಸಿಂಪಡಿಸಿ, ಮಾರುಕಟ್ಟೆಗೆ ತರುವ ಪ್ರಕರಣಗಳು ವಿಪರೀತವಾಗಿವೆ. ಈ ನಿಟ್ಟಿನಲ್ಲಿ ಹಣ್ಣು ಗೋದಾಮುಗಳ ಮೇಲೆ, ಸಗಟು ಹಣ್ಣು ವ್ಯಾಪಾರ ಕೇಂದ್ರಗಳ ತಪಾಸಣೆ ನಡೆಸಿ, ಹಣ್ಣುಗಳ ಮೇಲೆ ರಾಸಾಯನಿಕ ಅಂಶಗಳಿವೆಯೆ ಎಂಬುದನ್ನು ಪತ್ತೆ ಹಚ್ಚಬೇಕು. ಅಂತಹವುಗಳು ಕಂಡು ಬಂದರೆ ಅಂತಹ ವ್ಯಾಪಾರಸ್ಥರ ವಿರುದ್ಧ ಕ್ರಮ ಜರುಗಿಸಲು ಅವರು ಸೂಚಿಸಿದರು. ಅಲ್ಲದೇ, ಹೊರರಾಜ್ಯದಿಂದ ಬರುವ ಹಣ್ಣು ಲಾರಿಗಳನ್ನು ತಪಾಸಣೆ ನಡೆಸಿ, ಹಣ್ಣುಗಳಲ್ಲಿ ರಾಸಾಯನಿಕ ಕಂಡುಬಂದರೆ ಅಂತಹ ಲಾರಿಗಳನ್ನು ವಶಪಡಿಸಲು ಅವರು ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬೇಕರಿಗಳಲ್ಲಿ ಮಾರಾಟ ಮಾಡುವ ಸಿಹಿತಿಂಡಿಗಳಲ್ಲಿ ವಿಪರೀತ ಬಣ್ಣದ ಅಂಶಗಳು ಕಂಡುಬರುತ್ತಿವೆ. ಗ್ರಾಹಕರನ್ನು ಆಕರ್ಷಿಸಲು ಸಿಹಿತಿಂಡಿಗಳಲ್ಲಿ ಆಕರ್ಷಕ ಕಡು ಬಣ್ಣ ಬೆರೆಸಿ ಮಾರಾಟಕ್ಕಿಡಲಾಗುತ್ತಿದೆ. ಇದು ಕೂಡಾ ಆರೋಗ್ಯಕ್ಕೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಬೇಕರಿಗಳಲ್ಲಿ ಸಿಹಿತಿಂಡಿಗಳನ್ನು ಆಗಿಂದಾಗ್ಗೆ ಪರೀಕ್ಷಿಸಬೇಕು. ಬಳಸಲು ಅನುಮತಿಯಿಲ್ಲದ ಬಣ್ಣಗಳು ಕಂಡುಬಂದಲ್ಲಿ ಅಂತಹ ಬೇಕರಿಗಳ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾನೂನಿನ ಬಗ್ಗೆ ಕುಡಿಯುವ ನೀರಿನ ಬಾಟಲ್ ಘಟಕ, ಹಣ್ಣು ವ್ಯಾಪಾರಸ್ಥರು, ತಿಂಡಿ ತಿನಿಸು ಮಾರಾಟಗಾರರು, ಫಾಸ್ಟ್ ಫುಡ್ ಕೇಂದ್ರ ಮಾಲೀಕರು ಮತ್ತು ಬೇಕರಿ ಮಾಲೀಕರಿಗೆ ಜಾಗೃತಿ ಮೂಡಿಸಿ, ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಒಂದು ವೇಳೆ ಇದನ್ನು ನಿರ್ಲಕ್ಷಿಸಿ, ಕಾಯಿದೆಯನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಉದ್ಯಮಗಳ ವಿರುದ್ಧ ಮೇಲೆ ಕೇಸು ದಾಖಲಿಸಿ, ವಶಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿ, ನೀರಿನಿಂದ ಉದ್ಭವಿಸುವ ರೋಗಗಳು ಆಗಿಂದಾಗ್ಗೆ ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ನೀರಿನ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗದು. ಹೋಟೆಲ್, ಫುಡ್ ಸ್ಟಾಲ್ಗಳ ಆಹಾರಗಳಲ್ಲಿ ವಿಪರೀತ ಬಣ್ಣ ಹಾಗೂ ರುಚಿ ಹೆಚ್ಚಿಸಲು ರಾಸಾಯನಿಕ ಅಂಶಗಳನ್ನು ಬೆರೆಸಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ಹೇಳಿದರು.
ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ಎಚ್.ಟಿ. ರಾಜು ಮಾತನಾಡಿ, ತಾಲೂಕು ಆರೋಗ್ಯಾಧಿಕಾರಿಗಳು ಆಯಾ ತಾಲೂಕಿನ ಆಹಾರ ಸುರಕ್ಷತಾಧಿಕಾರಿಗಳಾಗಿರುತ್ತಾರೆ. ಮಂಗಳೂರು ಮಹಾನಗರಪಾಲಿಕೆ ಮತ್ತು ಪುತ್ತೂರು ತಾಲೂಕು ವ್ಯಾಪ್ತಿಗೆ ಹಿರಿಯ ಆಹಾರ ಸುರಕ್ಷತಾಧಿಕಾರಿಗಳು ಈ ಕಾಯಿದೆಯ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ಮಾನವನ ಆಹಾರಕ್ಕೆ ಸಂಬಂಧಿಸಿದ ಪ್ರತಿಯೊಂದು ವಸ್ತುವನ್ನು ಮಾರಾಟ ಮತ್ತು ಉತ್ಪಾದಕರು ಈ ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತಾರೆ. ಇವರು ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಕಾಯಿದೆಯನ್ವಯ ಲೈಸನ್ಸ್ ಪಡೆಯುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಜೇಶ್ ಮತ್ತಿತರರು ಇದ್ದರು.