ಬೈಂದೂರಿನಲ್ಲಿ ದೇವಸ್ಥಾನದ ತಡೆಗೋಡೆ ಕುಸಿದು ಕಾಲೇಜು ವಿದ್ಯಾರ್ಥಿನಿ ಸಾವು
ಕುಂದಾಪುರ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ದೇವಸ್ಥಾನವೊಂದ ತಡೆಗೋಡೆ ಕುಸಿದ ಪರಿಣಾಮ ವಿದ್ಯಾರ್ಥಿನಿಯೋರ್ವಳು ಮತಪಟ್ಟ ಘಟನೆ ಬೈಂದೂರಿನಲ್ಲಿ ವರದಿಯಾಗಿದೆ.
ಮೃತ ಯುವತಿಯನ್ನು ಬೈಂದೂರು ತಾಲೂಕಿನ ಹೇರೂರು ಗ್ರಾಮಪಂಚಾಯತ್ ವ್ಯಾಪ್ತಿಯ ಉಳ್ಳೂರು ನಿವಾಸಿ ಚಂದ್ರಶೇಖರ ಶೆಟ್ಟಿ ಹಾಗೂ ಹೇಮಾ ದಂಪತಿಯ ಮೂರನೆ ಪುತ್ರಿ ಧನ್ಯ (22) ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ಮನೆ ಸಮೀಪದಲ್ಲಿರುವ ಜಟ್ಟಿಗೇಶ್ವರ ದೇವಸ್ಥಾನಕ್ಕೆ ವಿದ್ಯಾರ್ಥಿನಿ ಧನ್ಯ ಕೈ ಮುಗಿಯಲು ಹೋಗುವಾಗ ಮಳೆಯಿಂದ ದೇವಸ್ಥಾನದ ತಡೆಗೋಡೆ ಕುಸಿದಿದ್ದು ಅದರಡಿಯಲ್ಲಿ ಸಿಕ್ಕಿಕೊಂಡು ವಿದ್ಯಾರ್ಥಿನಿ ಸಾವನಪ್ಪಿದ್ದಾಳೆ. ಮಂಗಳೂರಿನ ಮಾನಸಗಂಗೋತ್ರಿಯಲ್ಲಿ ಎಮ್ಎಸ್ಸಿ ವಿದ್ಯಾಭ್ಯಾಸ ನಡೆಸುತ್ತಿದ್ದ ಧನ್ಯ ಪ್ರಥಮ ವರ್ಷದ ಪರೀಕ್ಷೆ ಬರೆದು ರಜೆಗಾಗಿ ಮನೆಗೆ ಮರಳಿದ್ದಳು ಚಂದ್ರಶೇಖರ ಶೆಟ್ಟಿಯವರ ಮೂವರು ಹೆಣ್ಣುಮಕ್ಕಳಲ್ಲಿ ಧನ್ಯ ಕೊನೆಯವಳಾಗಿದ್ದು, ಹಿರಿಯ ಮಗಳಿಗೆ ವಿವಾಹವಾಗಿದ್ದು, ಎರಡನೆ ಮಗಳಿಗೆ ವಿವಾಹ ನಿಶ್ಚಯವಾಗಿತ್ತು.
ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಬೈಂದೂರು ತಾಲೂಕಿನ ಹೇರೂರು ಗ್ರಾಮಪಂಚಾಯತ್ ವ್ಯಾಪ್ತಿಯ ಉಳ್ಳೂರು ಜಟ್ಟಿಗೇಶ್ವರ ದೈವಸ್ಥಾನದ ಆವರಣ ಗೋಡೆ ಕುಸಿದಿದ್ದು ಪ್ರತಿಭಾನ್ವಿತ ವಿದ್ಯಾರ್ಥಿನಿಯೋರ್ವಳು ಜೀವತೆತ್ತಿದ್ದಾಳೆ. ಮಳೆ ಜೋರಾಗಿರುವ ಕಾರಣ ಮನೆಯವರು ಹೋಗುವುದು ಬೇಡ. ಇಲ್ಲೇ ನಿಂತು ಕೈ ಮುಗಿ ಎಂದರೂ ನಗುತ್ತಲೇ ಮನೆಯಿಂದ ಹೊರಟ ಧನ್ಯ ಶವವಾಗಿ ವಾಪಾಸಾಗಿರುವುದು ಮಾತ್ರ ದುರಂತ.
ಸ್ಥಳಕ್ಕೆ ಬೈಂದೂರು ತಹಶೀಲ್ದಾರರು ಮತ್ತು ಬೈಂದೂರು ಪೊಲೀಸರು ಭೇಟಿ ನೀಡಿದ್ದಾರೆ.
ಬೈಂದೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.