ಬೈಂದೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ- ಎರಡೇ ದಿನದಲ್ಲಿ ಕಳವಾದ ದನಗಳು ಪತ್ತೆ
ಕುಂದಾಪುರ: ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನಗಳನ್ನು ರಾತ್ರಿ ಸಮಯದಲ್ಲಿ ದುಷ್ಕರ್ಮಿಗಳು ಕದ್ದು ಕೊಂಡು ಹೋಗಿದ್ದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೈಂದೂರು ಪೊಲೀಸರು ಐದು ದನಗನ್ನು ಪತ್ತೆ ಹಚ್ಚಿದ್ದಾರೆ.
ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಯಳಜಿತ್ ಎಂಬಲ್ಲಿ ದಾರು ಗೌಡ್ತಿ ಮನೆಯ ಕೊಟ್ಟಿಗೆಯಲ್ಲಿದ್ದ ಎರಡು ದನ ಹಾಗೂ ಪಾರ್ವತಿ ಎನ್ನುವರ ಮನೆಯ ಕೊಟ್ಟಿಗೆಯಲ್ಲಿದ್ದ ಮೂರು ದನಗಳನ್ನು ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ಹೊತ್ತೊಯ್ದಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಘಟನೆಯ ಕುರಿತಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಗೋ ಕಳವಾದ ಮನೆಗಳಿಗೆ ಭೇಟಿ ನೀಡಿದ್ದಲ್ಲದೇ ಕೂಡಲೇ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಹಿಂದೂ ಪರವಾದ ಸಂಘಟನೆಗಳು ಕೂಡ ಪ್ರಕರಣ ಭೇದಿಸುವಂತೆ ಆಗ್ರಹಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೈಂದೂರು ಠಾಣೆ ಪಿಎಸ್ಐ ತಿಮ್ಮೇಶ್ ಬಿ.ಎನ್. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಗಿಳಿದಿದ್ದರು. ಇದೇ ವೇಳೆ ಕಂಡ್ಲೂರಿನ ಬಾತ್ಮೀದಾರರೊಬ್ಬರು ನದೀಮ್ ಎನ್ನುವನ ಮನೆಯಲ್ಲಿ ಜಾನುವಾರು ಕಟ್ಟಿದ್ದರ ಬಗ್ಗೆ ಪೊಲೀಸರಿಗೆ ವಿಡಿಯೋ ಹಾಕಿದ್ದು ಆ ವಿಡಿಯೋವನ್ನು ಪೊಲೀಸರು ಗೋವು ಕಳೆದುಕೊಂಡ ಕುಟುಂಬದವರಿಗೆ ತೋರಿಸಿ ದನಗಳ ಗುರುತು ಪತ್ತೆ ಮಾಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಂಡ್ಲೂರಿಗೆ ತೆರಳಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದು ಅಷ್ಟರಲ್ಲಾಗಲೇ ಆರೋಪಿಗಳು ಪರಾರಿಯಾಗಿದ್ದರು. ಇದೇ ಸಂದರ್ಭ ಪೊಲೀಸರು ದನಗಳನ್ನು ವಶಕ್ಕೆ ಪಡೆದು ರಕ್ಷಣೆ ಮಾಡಿ ಠಾಣೆಗೆ ತಂದಿದ್ದಾರೆ. ಬೈಂದೂರು ಪೊಲೀಸರಿಗೆ ಕಂಡ್ಲೂರಿನಲ್ಲಿರುವ ಕುಂದಾಪುರ ಗ್ರಾಮಾಂತರ ಠಾಣೆ ಪೊಲಿಸರು ಸಹಕಾರ ನೀಡಿದ್ದಾರೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಎರಡು ದಿನಗಳಲ್ಲಿ ಕುಟುಂಬಕ್ಕೆ ಜಾನುವಾರುಗಳನ್ನು ಪತ್ತೆ ಮಾಡಿಕೊಟ್ಟ ಬೈಂದೂರು ಪೊಲೀಸರ ಕಾರ್ಯಾಚರಣೆಯನ್ನು ನಾಗರಿಕರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರಶಂಸಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬೈಂದೂರು ಪ್ರೊಬೇಶನರಿ ಪಿಎಸ್ಐ ಐ.ಆರ್. ಗಡ್ಡೇಕರ್, ಎಎಸ್ಐ ಮಂಜುನಾಥ್, ಹೆಡ್ಕಾನ್ಸ್ಟೆಬಲ್ಗಳಾದ ಸಂತೋಷ್, ಶ್ರೀನಿವಾಸ, ನಾಗೇಂದ್ರ, ಸಿಬ್ಬಂದಿಗಳಾದ ಕೃಷ್ಣ, ಪ್ರಿನ್ಸ್ ಮೊದಲಾದವರಿದ್ದರು.