ಬೈಕಂಪಾಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡ ಕೇಂದ್ರ ಮಾರುಕಟ್ಟೆಯಿಂದ ಅತಂತ್ರಗೊಂಡ ವ್ಯಾಪಾರಸ್ಥರು; ಸಂಸದರಿಂದ ಭರವಸೆ
ಕೊರೋನಾ ವೈರಸ್ ನ್ನು ತಡೆಗಟ್ಟಲು ಹೇರಲಾದ ಲಾಕ್ ಡೌನ್ ನಿಂದಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸಲುವಾಗಿ ಜನದಟ್ಟಣೆಯಿಂದ ಪಾರಾಗಲು ನಗರದ ಹ್ರದಯ ಭಾಗದಲ್ಲಿದ್ದ ಕೇಂದ್ರ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಬೈಕಂಪಾಡಿಯ APMC ಯಾರ್ಡ್ ಗೆ ಸ್ಥಳಾಂತರಗೊಳಿಸಿದ ಜಿಲ್ಲಾಡಳಿತದ ಕ್ರಮದಿಂದಾಗಿ ಈಗಾಗಲೇ ಸಗಟು ಹಾಗೂ ಚಿಲ್ಲರೆ ವ್ಯಾಪಾರಸ್ಥರು ಭಾರೀ ಸಂಕಷ್ಟವನ್ನು ಅನುಭವಿಸುತ್ತಿದ್ದು,ಈ ಬಗ್ಗೆ ಸಂಸದರಾದ ನಳೀನ್ ಕುಮಾರ್ ಕಟೀಲುರವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸವಿವರವಾಗಿ ಚರ್ಚಿಸಲಾಯಿತು.
_ಕೊರೋನಾ ವೈರಸ್ ನ ಗಂಭೀರತೆಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿಗಳು ತಾ.2-04-2020ರಿಂದ 14-04-2020ರವರೆಗೆ ಕೇಂದ್ರ ಮಾರುಕಟ್ಟೆಯನ್ನು ಸಂಪುರ್ಣವಾಗಿ ಸ್ಥಗಿತಗೊಳಿಸಿ, ಇಡೀ ಕೇಂದ್ರ ಮಾರುಕಟ್ಟೆಯನ್ನು ತಾತ್ಕಾಲಿಕ ನೆಲೆಯಲ್ಲಿ ಬೈಕಂಪಾಡಿಯ APMC ಯಾರ್ಡ್ ಗೆ ಸ್ಥಳಾಂತರಿಸಬೇಕೆಂದು ಆದೇಶ ನೀಡಿದ್ದರು. ಆದರೆ ಅಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಕೊಡದೆ,ಧೂಳಿನಿಂದ ತುಂಬಿದ ಆ ಜಾಗದಲ್ಲಿ ಜನಸಾಮಾನ್ಯರು ತಿನ್ನುವ ಆಹಾರ ಪದಾರ್ಥಗಳಾದ ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡಬೇಕಾದ ದುಸ್ಥಿತಿ ಬಂದೊದಗಿತ್ತು.ಈ ಬಗ್ಗೆ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಉನ್ನ ಮಟ್ಟದ ನಿಯೋಗವೊಂದು ಮಾನ್ಯ ಜಿಲ್ಲಾಧಿಕಾರಿಗಳನ್ನು, ಮನಪಾ ಆಯುಕ್ತರನ್ನು, ಸಂಸದರನ್ನು,ಶಾಸಕರನ್ನು, ಮೇಯರ್ ರವರನ್ನು ಮುಖತಃ ಭೇಟಿಯಾಗಿ ತಮ್ಮ ಅಹವಾಲನ್ನು ಮುಂದಿಟ್ಟಿತು.
ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ,ಮಾನ್ಯ ಸಂಸದರ ಸಮಕ್ಷಮದಲ್ಲಿ ಬೈಕಂಪಾಡಿಯ APMC ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಯಿತು.
ಸಭೆಯಲ್ಲಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾದ ಕೇಂದ್ರ ಮಾರುಕಟ್ಟೆಯನ್ನು ಲಾಕ್ ಡೌನ್ ಹೆಸರಿನಲ್ಲಿ ಏಕಾಏಕಿಯಾಗಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಬೈಕಂಪಾಡಿಗೆ ಸ್ಥಳಾಂತರಗೊಳಿಸಿರುವುದು ಸರ್ವಥಾ ಸರಿಯಿಲ್ಲ. ಇದರಿಂದಾಗಿ ಸಗಟು ಹಾಗೂ ಚಿಲ್ಲರೆ ವ್ಯಾಪಾರಸ್ಥರು ಭಾರೀ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಮಾತ್ರವಲ್ಲದೆ ಅಲ್ಲಿನ ಕೂಲಿ ಕಾರ್ಮಿಕರ ಬವಣೆಯನ್ನಂತೂ ಹೇಳತೀರದಾಗಿದೆ.ಇಂತಹ ಸಂಧರ್ಭದಲ್ಲಿ ಕೇಂದ್ರ ಮಾರುಕಟ್ಟೆಯನ್ನು ನಗರದ ಹ್ರದಯ ಭಾಗದಲ್ಲಿ ಅಥವಾ ನಗರದ ಸುತ್ತಮುತ್ತ ಸಾಕಷ್ಟು ಸ್ಥಳದ ಅವಕಾಶಗಳಿದ್ದು, ಇಲ್ಲಿಯೇ ಪ್ರಾರಂಭಿಸಬೇಕೆಂದು* ಒತ್ತಾಯಿಸಿದರು.
ಸಭೆಯಲ್ಲಿ ಭಾಗವಹಿಸಿದ ಶಾಸಕರುಗಳಾದ ಡಿ.ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಮೇಯರ್ ದಿವಾಕರ್,APMC ಅಧ್ಯಕ್ಷರಾದ ಪ್ರವೀಣ್ ಕುಮಾರ್ ರವರು *ತಮ್ಮ ಅಭಿಪ್ರಾಯಗಳನ್ನು ಮಂಡಿಸಿ,ವ್ಯಾಪಾರಸ್ಥರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದೆ,ಸಗಟು ಹಾಗೂ ಚಿಲ್ಲರೆ ವ್ಯಾಪಾರಸ್ಥರ ಹಿತಾಸಕ್ತಿಗಳನ್ನು ಕಾಪಾಡುವುದಾಗಿ* ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಸಂಸದರಾದ ನಳೀನ್ ಕುಮಾರ್ ಕಟೀಲು ರವರು ಮಾತನಾಡುತ್ತಾ, *ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರು ಜಿಲ್ಲೆಯ ಆರ್ಥಿಕತೆಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡುತ್ತಿದ್ದು, ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವುದಿಲ್ಲ.4-5 ದಿನಗಳೊಳಗೆ ಸಂಬಂಧಪಟ್ಟ ಇತರ ಅಧಿಕಾರಿಗಳೊಂದಿಗೆ ಚರ್ಚಿಸಿ,ಬಳಿಕ ವ್ಯಾಪಾರಸ್ಥರೊಂದಿಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಭರವಸೆಯನ್ನು ನೀಡಿದರು.
ಸಭೆಯಲ್ಲಿ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮುಸ್ತಫಾ ಕುಂಞ,ಪ್ರಧಾನ ಕಾರ್ಯದರ್ಶಿ ಗಳಾದ ಜನಾರ್ದನ ಸಾಲ್ಯಾನ್,ಇತರ ಪದಾಧಿಕಾರಿಗಳಾದ ಅನಿಲ್ ಕುಮಾರ್,AJ ಶೇಖರ್, ಬಿ.ಎಂ.ಮೊಯಿದಿನ್, ಚೆರಿಯೋನು,ಕಲಾಂ,ಹನೀಫ್ ಹಾಜಿ, ಬಿ.ಎಚ್.ಹಮೀದ್, APMC ಸದಸ್ಯರಾದ ಕ್ರಷ್ಣರಾಜ ಹೆಗ್ಡೆ,ರಾಘವ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು