ಬೊಳಿಯಾರ್ ಪ್ರಕರಣದಲ್ಲಿ ಹೊರಗಿನವರು ಮೂಗು ತೂರಿಸೋ ಕೆಲಸ ಬಿಟ್ಟು ಬಿಡಿ – ಯು ಟಿ ಖಾದರ್

Spread the love

ಬೊಳಿಯಾರ್ ಪ್ರಕರಣದಲ್ಲಿ ಹೊರಗಿನವರು ಮೂಗು ತೂರಿಸೋ ಕೆಲಸ ಬಿಟ್ಟು ಬಿಡಿ – ಯು ಟಿ ಖಾದರ್

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಬೋಳಿಯಾರ್ ಗ್ರಾಮ ಸೌಹಾರ್ದಕ್ಕೆ ಮಾದರಿಯಾಗಿದ್ದು, ಅಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿ ಅಲ್ಲಿನ ಸ್ಥಳೀಯರು ಹಾಗೂ ಪೊಲೀಸರು ಪ್ರಕರಣವನ್ನು ಬಗೆಹರಿಸಲಿದ್ದಾರೆ. ಹೊರಗಿನವರು ಬಾಯಿ ಮುಚ್ಚಿ ಕೂರುವುದೇ ದೇಶ ಪ್ರೇಮ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿ ಕೆಲವೇ ಕೆಲವು ಯುವಕರಿಂದ ಕೆಟ್ಟ ಹೆಸರು ಬಂದಿದೆ. ಅದಕ್ಕಾಗಿ ಹೊರಗಿನವರು ಅಲ್ಲಿ ರಾಜಕೀಯ ಮಾಡಿ ಅಲ್ಲಿನ ವಾತಾವರಣವನ್ನು ಮತ್ತಷ್ಟು ಕೆಡಿಸುವ ಪ್ರಯತ್ನ ಬೇಡ ಎಂಬುದು ನನ್ನ ಮನವಿ ಎಂದರು.

ಬೋಳಿಯಾರು ವಿಚಾರದಲ್ಲಿ ರಾಜಕೀಯ ಮಾಡಿದರೆ ಯಾರಿಗೂ ಒಂದು ಮತವೂ ಹೆಚ್ಚಾಗದು. ವಿಧಾನಸಭಾ ಚುನಾವಣೆಯಲ್ಲಿ ಎರಡು ಪಕ್ಷದವರು ಸೇರಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರೂ ಆಗಿಲ್ಲ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡಿ ಸಮಸ್ಯೆ ಸೃಷ್ಟಿಸುವವರು ನಿಜವಾದ ದೇಶದ್ರೋಹಿಗಳು ಎಂದು ಖಾದರ್ ಹೇಳಿದರು.

ಭಾರತ್ ಮಾತಾಕಿ ಜೈ ಎಂದು ಯಾರೂ ಹೇಳಬಹುದು. ಅದಕ್ಕೆ ಯಾರೂ ಆಕ್ಷೇಪ ಮಾಡುವುದಿಲ್ಲ. ಆದರೆ ಅಲ್ಲಿ ಏನೋ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಇದನ್ನು ಪೊಲೀಸರು ಸಿಸಿಟಿವಿ ಕ್ಯಾಮರಾದ ಮೂಲಕ ತನಿಖೆ ನಡೆಸುತ್ತಿದ್ದಾರೆ. ಮೆರವಣಿಗೆ ಮುಗಿದ ಬಳಿಕ ಮೂವರು ಬೈಕಿನಲ್ಲಿ ಬಂದು ಪ್ರಚೋದನಕಾರಿ ಘೋಷಣೆ ಕೂಗುವ ಉದ್ದೇಶವೇನು, ಇದು ತಪ್ಪು ಎಂದು ಹೇಳಿದ ಯು.ಟಿ.ಖಾದರ್, ಅದಕ್ಕೆ ಪ್ರತಿಯಾಗಿ ಅವರನ್ನು ಹಿಂಬಾಲಿಸಿಕೊಂಡು ಹಲ್ಲೆ ಮಾಡಿರುವ ಕೃತ್ಯವೂ ತಪ್ಪೇ. ಈ ಎರಡೂ ಘಟನೆಗಳ ಬಗ್ಗೆ ಪೊಲೀಸರು ಕಾನೂನು ಪ್ರಕಾರ ಕ್ರಮ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಅಲ್ಲಿ ಪ್ರಚೋದನಕಾರಿ ಮಾತುಗಳ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಈ ಬಗ್ಗೆ ಹೊರಗಿನವರು ಬಂದು ಮಾತನಾಡುವ ಅಗತ್ಯ ಇಲ್ಲ. ಪೊಲೀಸ್ ಇಲಾಖೆಯಿಂದ ನ್ಯಾಯ ದೊರಕಿಲ್ಲ ಎಂದು ನನ್ನ ಬಳಿ ಬಂದರೆ ಈ ಬಗ್ಗೆ ಖಂಡಿತಾ ನಾನು ಪರಿಶೀಲಿಸುತ್ತೇನೆ. ನನಗೆ ಅಂತಹ ಯಾವುದೇ ದೂರು ಬಂದಿಲ್ಲ. ವಾಟ್ಸ್ ಆಯಪ್ ವಾಯ್ಸ್ ಮೆಸೇಜ್ ಮೂಲಕ ಯಾರೋ ಹೇಳಿಕೊಂಡು ತಿರುಗಾಡುತ್ತಿದ್ದರೆ ಅದಕ್ಕೆ ನಾನು ಪ್ರತಿಕ್ರಿಯಿಸಲಾರೆ. ನಿರಪರಾಧಿಗಳಿಗೆ ಪೊಲೀಸರು ತೊಂದರೆ ನೀಡಬಾರದು. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದವರು ತಲೆಮರೆಸಿಕೊಂಡಾಗ ವಿಚಾರಣೆಗಾಗಿ ಪೊಲೀಸರು ಕರೆದರೆ ಅದನ್ನು ದೊಡ್ಡ ವಿಚಾರ ಮಾಡಬೇಕಾಗಿಲ್ಲ ಎಂದು ಖಾದರ್ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಧ್ವನಿ ಸಂದೇಶ ಹಾಕಿ ಜನರನ್ನು ದಾರಿತಪ್ಪಿಸುವವರ ಮೇಲೂ ಪೊಲೀಸರು ಕ್ರಮ ವಹಿಸಬೇಕು. ಇಂತಹ ಘಟನೆಗಳ ಸಂದರ್ಭ ರಾಜಕಾರಣಿಗಳು ಅಲ್ಲಿ ಭೇಟಿ ನೀಡಿದಾಗ ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಭೇಟಿ ನೀಡಿಲ್ಲ. ಸಮಸ್ಯೆ ಸೃಷ್ಟಿಸಿ ಗಲಾಟೆ ಮಾಡಿಸಿದವರನ್ನು ನಾವು ನೋಡಬೇಕೇ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸ್ಪೀಕರ್ ಖಾದರ್ ಪ್ರಶ್ನಿಸಿದರು.

ಅಲ್ಲಿನ ಜನರನ್ನು ಅವರಷ್ಟಕ್ಕೆ ಬಿಡಿ. ಪೊಲೀಸರು ಹಾಗೂ ಜನರು ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ರಾಜಕಾರಣಿಗಳು ಇಂತಹ ವಿಚಾರಗಳಿಗೆ ತಲೆಹಾಕಬಾರದು. ನನಗೆ ನನ್ನ ಕ್ಷೇತ್ರದ ಎಲ್ಲರೂ ಆತ್ಮೀಯರೇ, ಆದರೆ ತಪ್ಪು ಮಾಡಿದವರಿಗೆ ಬೆಂಬಲ ನೀಡುವುದಿಲ್ಲ. ಈ ವಿಷಯದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಾನು ಆಸ್ಪತ್ರೆಗೆ ಭೇಟಿ ನೀಡುವುದು ಎಲ್ಲಾ ಮಾಡಿದರೆ, ಮತ್ತೆ ಗೊಂದಲ ಆಗುತ್ತದೆ. ನಾನೂ ಸೇರಿ ರಾಜಕೀಯದವರು ಅಲ್ಲಿಗೆ ಹೋಗಲೇಬಾರದು ಎಂದು ಯು.ಟಿ.ಖಾದರ್ ತಾಕೀತು ಮಾಡಿದರು.

ಚುನಾವಣೆ ಸಂದರ್ಭ ಕ್ಷೇತ್ರದ ಜನರಿಗೆ 24×7 ಕುಡಿಯುವ ನೀರು ಒದಗಿಸುವ ಯೋಜನೆ ಮಾಡುವ ಮಾತು ಕೊಟ್ಟಿದ್ದೆ. ಅದರಂತೆ 249 ಕೋಟಿ ರೂ. ವೆಚ್ಚದಲ್ಲಿ ಉಳ್ಳಾಲಕ್ಕೆ ಪ್ರತ್ಯೇಕ ನೀರಿನ ವ್ಯವಸ್ಥೆಯ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಥಮ ಹಂತದ ಉದ್ಘಾಟನೆ ಹಾಗೂ 2ನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರ ಮೂಲಕ ಶೀಘ್ರವೇ ಚಾಲನೆ ನೀಡಲಾಗುವುದು.

ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಿಡುಗಡೆಯಾದ 249 ಕೋಟಿ ರೂ.ಗಳಲ್ಲಿ ಸಜಿಪದಲ್ಲಿ ಜಾಕ್ವೆಲ್ ನಿಂದ ಕೊಣಾಜೆಗೆ ನೀರನ್ನು ಹಾಯಿಸಿ ಶುದ್ಧೀಕರಣಗೊಂಡು ಪೈಪ್ಲೈನ್ ಮೂಲಕ ಉಳ್ಳಾಲ, ತಲಪಾಡಿವರೆಗೆ ಹರಿಸುವ ಕಾಮಗಾರಿ ಪೂರ್ಣಗೊಂಡಿದೆ. ಚೆಂಬುಗುಡ್ಡೆಯಲ್ಲಿ ಕ್ಷೇತ್ರದ ನಗರ ಭಾಗಕ್ಕೆ ನೀರು ಪೂರೈಸಲು 70 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣವಾಗಿದೆ. 2ನೇ ಹಂತದಲ್ಲಿ ಗ್ರಾಮೀಣ ಮಟ್ಟಕ್ಕೂ ನೀರು ಪೂರೈಕೆಗಾಗಿ ಮುಖ್ಯ ಟ್ಯಾಂಕ್ ಗೆ ನೀರು ಹರಿಸಿ ಅಲ್ಲಿಂದ ಸಣ್ಣ ಟ್ಯಾಂಕ್ ಗಳಿಂದ ಮನೆಗಳಿಗೆ ಸಂಪರ್ಕ ನೀಡುವ ಕೆಲಸ ಆಲಿದೆ ಇದಕ್ಕಾಗಿ 386 ಕೋಟಿ ರೂ.ಗಳ ಅನುದಾನ ಬಿಡುಗಡೆ ಆಗಿದೆ ಎಂದು ಅವರು ಹೇಳಿದರು.

ಇದರ ಜೊತೆಯಲ್ಲಿ ರಸ್ತೆ ಹಾಗೂ ವಿದ್ಯುತ್, ಶಿಕ್ಷಣಕ್ಕೆ ಅನುದಾನ ಮೀಸಲಿಡಲಾಗಿದೆ. ಇದಲ್ಲದೆ, ಅಬ್ಬಕ್ಕ ಭವನ ಹಾಗೂ ಬ್ಯಾರಿ ಭವನ ಕೆಲಸ ಅಗಲಿದೆ ಎಂದು ಅವರು ಹೇಳಿದರು.

ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಸಭೆ, ಚರ್ಚೆ ನಡೆದಿದೆ. ಸಮುದ್ರ ಕಿನಾರೆಯಲ್ಲಿ ಶಾಶ್ವತ ಯೋಜನೆ ಮೂಲಕ ಮುಂಬೈ, ಚೆನ್ನೈ ಹಾಗೂ ಕೇರಳದಲ್ಲಿ ಮಾಡಿರುವ ಯೋಜನೆ ಫಲಪ್ರದವಾಗಿಲ್ಲ. ಹಾಗಾಗಿ ತಜ್ಞರನ್ನು ಕರೆಸಿಕೊಂಡು ಈ ಕುರಿತು ಸಭೆಯಲ್ಲಿ ಸಲಹೆ ನೀಡಲಾಗಿದೆ. ಕಳೆದ ವರ್ಷ ಮನೆ ನಾಶ ಆಗದ ರೀತಿಯಲ್ಲಿ ಕ್ರಮ ವಹಿಸಲಾಗಿತ್ತು. ಈ ಬಾರಿಯೂ ಅಪಾಯಕಾರಿ ಜಾಗವನ್ನು ಗುರುತಿಸಿ ಕ್ರಮ ವಹಿಸಲು ಮುಂದಾಗಿದ್ದರೂ ಯಾವ ಜಾಗದಲ್ಲಿ ಕಡಲ್ಕೊರೆತ ಸಂಭವಿಸುತ್ತದೆ ಎಂದು ಮುಂಚಿತವಾಗಿ ಹೇಳಲು ಸಾಧ್ಯವಾಗದೆ ತೊಂದರೆಯಾಗುತ್ತಿದೆ. ಬಟ್ಟಂಪಾಡಿಗೆ ಸಂಬಂಧಿಸಿ 2 ಪ್ರಸ್ತಾವ ಸಿದ್ಧವಾಗಿದೆ ಎಂದರು.


Spread the love