ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂ. ದೋಚಿದ ಪ್ರಕರಣ: ಕೇರಳದ ಇಬ್ಬರು ಆರೋಪಿಗಳ ಬಂಧನ

Spread the love

ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂ. ದೋಚಿದ ಪ್ರಕರಣ: ಕೇರಳದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ನಗರದ ಇಬ್ಬರ ಬ್ಯಾಂಕ್ ಖಾತೆಯಿಂದ ಕೊಟ್ಯಂತರ ರೂ. ದೋಚಿದ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಸೆನ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೇರಳದ ಪಾಲಕ್ಕಾಡ್ ಮಲಪ್ಪುರಂ ವರಿಯಂಕುಲಂ ಜಾಫರ್ ಕೆ (49 ) ಮತ್ತು ಕೋಝಿಕೋಡ್ ಚೊಕ್ಕತ್‌ನ ಆಕಾಶ್ ಎ (22) ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.

ಪ್ರಕರಣದಲ್ಲಿ ಅಪಚಿರಿತ ವ್ಯಕ್ತಿ ವಾಟ್ಸ್ ಆ್ಯಪ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ತಿಳಿಸಿ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವ ಬಗ್ಗೆ ಸ್ಟೋಕ್ ಫ್ರಂಟ್ ಲೈನ್ ಎಂಬ ಲಿಂಕ್‌ನ್ನು ಕಳುಹಿಸಿ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು 10,84,017 ರೂ. ಹಣ ವಂಚಿಸಿರುವುದಾಗಿ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ತನಿಖೆ ಕೈಗೊಂಡಾಗ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರವನ್ನು ಸಂಗ್ರಹಿಸಿ ನೋಡಿದಾಗ ಕೇರಳ ಮೂಲದ ಆರೋಪಿ ಜಾಫರ್ ಕೆ ಎಂಬಾತನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದು ಕಂಡುಬಂದಿತ್ತು. ಪೊಲೀಸರು ಡಿ.23ರಂದು ಕೇರಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ಧಾರೆ.

ಇನ್ನೊಂದು ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಯು ಟ್ರಾಯ್‌ನಿಂದ ಪ್ರತಿನಿಧಿಸಿ ಕರೆ ಮಾಡುವುದಾಗಿ ತಿಳಿಸಿ ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬ್ರ ರಿಜಿಸ್ಟರ್ ಆಗಿದ್ದು, ಮುಂಬೈನ ಅಂಧೇರಿ(ಇ)ಯಲ್ಲಿ ಹಲವು ಕಾನೂನು ಬಾಹಿರ ಚಟುವಟಿಕೆ ಗಳಲ್ಲಿ ಒಳಗೊಂಡಿದ್ದು, ಮಾರ್ಕೆಟಿಂಗ್ ನೆಪದಲ್ಲಿ ನಿಮಗೆ ಸಂಬಂಧಿಸಿದ ಮೊಬೈಲ್ ನಂಬ್ರದಿಂದ ಕಾಲ್ ಮಾಡಿ ಕಿರುಕುಳ ಕೊಡುತ್ತಿರುವುದರ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು ಕೂಡಲೇ ಅಂಧೇರಿ(ಇ) ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಇಲ್ಲದಿದ್ದಲ್ಲಿ ನಿಮ್ಮ ಮೊಬೈಲ್ ನಂಬ್ರ ಸೇವೆಯನ್ನು 2 ಗಂಟೆಗಳಲ್ಲಿ ಕೊನೆಗೊಳಿಸಲಾಗುವುದು ಎಂದು ವಂಚನೆಗೊಳಗಾದ ವ್ಯಕ್ತಿಗೆ ತಿಳಿಸಿದ ಎನ್ನಲಾಗಿದೆ. ಅಲ್ಲದೇ ಅಂಧೇರಿಯ ಕೆನರಾ ಬ್ಯಾಂಕ್‌ನಲ್ಲಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದ್ದು, ಇದಕ್ಕೆ ಐಡೆಂಟಿಟಿ ಬಳಸಿ ಸಿಮ್ ಖರೀದಿಸಿರುವುದಾಗಿಯೂ, ಆ ಕಾರಣದಿಂದ ನಿಮ್ಮನ್ನು ಬಂಧಿಸಿ ಜೈಲುಗಟ್ಟುವುದಾಗಿ ಡಿಜಿಟಲ್ ಆರೆಸ್ಟ್ ಮಾಡುವುದಾಗಿ ಬೆದರಿಸಿ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ.1,71,00,000 ಹಣವನ್ನು ಪಡೆದು ವಂಚನೆ ಮಾಡಿರುವ ಬಗ್ಗೆ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ಆಕಾಶ್ ಎ ಎಂಬಾತನು ತನ್ನ ಬ್ಯಾಂಕ್ ಖಾತೆಯನ್ನು ಸೈಬರ್ ಅಪರಾಧಕ್ಕೆ ಉಪಯೋಗಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಕೇರಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌, ಡಿಸಿಪಿಗಳಾದ ಸಿದ್ದಾರ್ಥ ಗೋಯಲ್ ಮತ್ತು ರವಿ ಶಂಕರ್ ಮಾರ್ಗದರ್ಶನದಲ್ಲಿ ಸೆನ್ ಠಾಣಾಧಿಕಾರಿ ಎಸಿಪಿ ರವೀಶ್ ನಾಯಕ ಮತ್ತು ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸತೀಶ್ ಎಂ ಪಿ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಪ್ರಕರಣದಲ್ಲಿ ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಆಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.


Spread the love
Subscribe
Notify of

0 Comments
Inline Feedbacks
View all comments