ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನಪೀಠ ಸಿದ್ದರಾಮಯ್ಯರಿಂದ ಉದ್ಘಾಟನೆ
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವು ಸಾಮಾಜಿಕ ಚಿಂತನೆಗಳನ್ನು ಒಳಗೊಂಡಿದ್ದು ಅದನ್ನು ಯುವ ವಿದ್ಯಾರ್ಥಿ ಸಮೂಹಕ್ಕೆ ತಿಳಿಸುವ ಕೆಲಸ ನಡೆಯಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಲಾಗುವ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನಪೀಠವನ್ನು ಉದ್ಘಾಟಿಸಿ ಮಾತನಾಡಿದರು.
ನಾರಾಯಣಗುರುಗಳು ಕೇರಳದಲ್ಲಿ ದಲಿತರು, ಶೂದ್ರರನ್ನು ಸವರ್ಣಿಯರು ತಾರತಮ್ಯದಿಂದ ಕಾಣುತ್ತಿರುವುದನ್ನು ವಿರೋಧಿಸಿ ಸೌಮ್ಯವಾಗಿ ಹೋರಾಟ ಆರಂಭಿಸಿದರು. ದಲಿತರಿಗೆ ಪ್ರವೇಶವಿಲ್ಲದ ದೇವಸ್ಥಾನವನ್ನೇ ಬಹಿಷ್ಕರಿಸಿದ್ದ ನಾರಾಯಣಗುರು ಕೇರಳದಲ್ಲಿ ದೇವಸ್ಥಾನಗಳನ್ನು ಸ್ಥಾಪಿಸಿ ಕ್ರಾಂತಿ ನಡೆಸಿದ್ದರು. ಅಂತಹ ಸಮಾಜ ಸುಧಾರಕರ ಹೆಸರಿನಲ್ಲಿ ಮಂಗಳೂರು ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆಗೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಅಸ್ಪಶ್ರ್ಯತೆ ಎನ್ನುವುದು ಮನೋರೋಗವಿದ್ದಂತೆ ಅದನ್ನು ಹೋಗಲಾಡಿಸಲು ಮನಪರಿವರ್ತನೆಯಾಗಬೇಕಾಗಿದೆ. ಇದರಿಂದ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಮುಖ್ಯಮಂತ್ರಿ ಹೇಳಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಮಾಜಿ ಸಚಿವ, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ವಿಶ್ರಾಂತ ಕುಲಪತಿ ಪ್ರೋ ಬಿ ಎ ವಿವೇಕ ರೈ, ವಿವಿ ಕುಲಪತಿ ಪ್ರೋ ಕೆ ಭೈರಪ್ಪ ಉಪಸ್ಥಿತರಿದ್ದರು.