ಬ್ರಹ್ಮಾವರ: ಮಕ್ಕಳ ಮನಸ್ಸಿನಲ್ಲಿ ಅನೇಕ ಭಾವನೆಗಳು, ಪ್ರತಿಭೆಗಳು ಹುದುಗಿರುತ್ತದೆ. ಇಂದಿನ ಶಿಕ್ಷಣ ಪದ್ಧತಿಯಿಂದ ತರಗತಿಯಲ್ಲಿ ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಿಲ್ಲ. ರಜಾ ಕಾಲದಲ್ಲಿ ನಡೆಯುವ ಶಿಬಿರಗಳಿಂದ ಸ್ವಲ್ಪಮಟ್ಟಿಗಾದರೂ ಮಕ್ಕಳ ಪ್ರತಿಭೆಯನ್ನು ಹೊರತೆಗೆಯಲು ಸಾಧ್ಯ ಎಂದು ಬ್ರಹ್ಮಾವರ ಲಿಟ್ಲ್ರಾಕ್ ಇಂಡಿಯನ್ ಸ್ಕೂಲ್ನ ಅಧ್ಯಾಪಿಕೆ ಜೋಲಿ ಪ್ರಕಾಶ್ ಹೇಳಿದರು.
ಬ್ರಹ್ಮಾವರದ ಕ್ರಾಸ್ಲ್ಯಾಂಡ್ ಕಾಲೇಜಿನಲ್ಲಿ ಇತ್ತೀಚೆಗೆ ಯು.ಜಿ.ಸಿ ಪ್ರಾಯೋಜಕತ್ವದಲ್ಲಿ ನಡೆದ ಒಂದು ದಿನದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೋಟ ಪ್ರಜ್ಞಾ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಭಟ್ ವ್ಯಕ್ತಿತ್ವ ವಿಕಸನ, ಸಂವಹನ ಕಲೆಯ ಬಗ್ಗೆ ಮತ್ತು ಪೇತ್ರಿ ಕನ್ನಾರಿನ ಅನ್ನಪೂರ್ಣ ನರ್ಸರಿಯ ಪ್ರಸನ್ನಾ ಪ್ರಸಾದ್ ಭಟ್ ಕರಕುಶಲ ಕಲೆ, ಗ್ರೀಟಿಂಗ್ ಕಾರ್ಡ್ ತಯಾರಿಯ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭ ಹೇರಂಜೆ ಈಶ್ವರನಗರದ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ಕಾಲೇಜಿನ ವತಿಯಿಂದ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲ ಸ್ಯಾಮುಯೆಲ್ ಕೆ ಸ್ಯಾಮುಯೆಲ್, ಉಪಪ್ರಾಂಶುಪಾಲ ಎಲಿಜೆಬೆತ್ ರಾಯ್, ಕಾರ್ಯಕ್ರಮದ ಸಂಯೋಜಕಿ ರಿಬೂ ಸ್ಯಾಮುಯೆಲ್, ಉಪನ್ಯಾಸಕಿ ಜ್ಯೋತಿ, ದೀಪಾ ಮತ್ತು ಜ್ಯೋತಿ ಉಪಸ್ಥಿತರಿದ್ದರು. ದೀಪಾ ಸ್ವಾಗತಿಸಿದರು. ಶೇಷಗಿರಿ ಭಟ್ ವಂದಿಸಿದರು.