ಬ್ರಹ್ಮಾವರ: ರೂ 8.42 ಲಕ್ಷ ಮೌಲ್ಯದ ಗಾಂಜಾ ಸಾಗಾಟ ಯತ್ನ, ಮೂವರ ಬಂಧನ
ಉಡುಪಿ: ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಉಡುಪಿ ಸೆನ್ ಪೊಲೀಸ್ ಸಿಬಂದಿಗಳ ತಂಡ ಬಂಧಿಸಿ ಅವರಿಂದ ರೂ 8.42 ಲಕ್ಷ ಮೌಲ್ಯದ ಗಾಂಜಾ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಉಪ್ಪೂರು ನಿವಾಸಿ ಸತ್ಯರಾಜ್ @ತಂಬಿ ಅಣ್ಣ (32), ಕೃಷ್ಣ (43) ಮತ್ತು ಶಕಿಲೇಶ್ (25) ಎಂದು ಗುರುತಿಸಲಾಗಿದೆ.
ಶುಕ್ರವಾರ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ರವರ ನೇತೃತ್ವದಲ್ಲಿ, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಪ್ರವೀಣ್, ಪ್ರಶಾಂತ್, ಮಾಯಪ್ಪ, ಪರಶುರಾಮ್ ರವರನ್ನೊಳಗೊಂಡ ತಂಡವು ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಕೆಜಿ ರೋಡ್ ಕ್ರಾಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮುಂಬೈಯಿಂದ ತರಿಸಿಕೊಂಡಿರುವ ನಿಷೇದಿತ ಮಾದಕ ವಸ್ತು ಗಾಂಜಾ ಹೊಂದಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ
ಬಂಧಿತರಿಂದ 10 ಕೆ.ಜಿ, 138 ಗ್ರಾಂ ತೂಕದ ಗಾಂಜಾ, ರೂ 1570 ನಗದು ಹಾಗೂ 3 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂ, 8,42,610/ ಆಗಿರುತ್ತದೆ.
ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 80/2024 ಕಲಂ: 8(C), 20(b) (ii) (B) NDPS Act 1985ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.