ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರ: ಸಹಕಾರಿ ಇಲಾಖೆಯ ಪ್ರವೀಣ್ ಬಿ.ನಾಯಕ್, 10 ಮಂದಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲು ಕ್ರಮ 

Spread the love

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರ: ಸಹಕಾರಿ ಇಲಾಖೆಯ ಪ್ರವೀಣ್ ಬಿ.ನಾಯಕ್, 10 ಮಂದಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲು ಕ್ರಮ 

ಬೆಂಗಳೂರು: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ದಕ್ಷಿಣಕನ್ನಡ ಜಿಲ್ಲಾ ಸಹಕಾರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದ ಅವ್ಯವಹಾರ ಪ್ರಕರಣದಲ್ಲಿ ಮೊದಲನೆ ಆರೋಪಿಯಾದ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರವೀಣ್ ಬಿ.ನಾಯಕ್ ವಿರುದ್ಧ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿಯನ್ನು ಸಲ್ಲಿಸಲು ಕ್ರಮ ವಹಿಸಲಾಗುತ್ತಿದೆ ಎಂದು ರಾಜ್ಯ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದ್ದಾರೆ.

ಪ್ರವೀಣ್ ನಾಯಕ್ ಅವರು ಸಹಕಾರಿ ಇಲಾಖೆ ಅಧಿಕಾರಿಯಾಗಿರುವು ದರಿಂದ ಇವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲು ಫೆ.27ರಂದು ಸಹಕಾರ ಇಲಾಖೆಯಿಂದ ಅಭಿಯೋಜನಾ ಮಂಜೂರಾತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಗುರುವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ನಿಯಮ-72ರಡಿಯಲ್ಲಿ ನೀಡಿರುವ ಸೂಚನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. 14 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ಪ್ರಕರಣದಲ್ಲಿ 11 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. 10 ಮಂದಿ ಆರೋಪಿತಗಳು ಕಾರ್ಖಾನೆಯ ನಿರ್ದೇಶಕ ರಾಗಿದ್ದು, ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲು ಅಭಿಯೋಜನಾ ಮಂಜೂರಾತಿ ನೀಡುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಫೆ.28ರಂದು ಪ್ರಸ್ತಾವವನ್ನು ಸಹಕಾರ ಇಲಾಖೆಯಿಂದ ವರ್ಗಾಯಿಸಲಾಗಿದೆ ಎಂದು ಅವರು ಉತ್ತರದಲ್ಲಿ ತಿಳಿಸಿದ್ದಾರೆ.

10 ಮಂದಿ ಆರೋಪಿತ ನಿರ್ದೇಶಕರ ಮೇಲೆ ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ-1988ರನ್ವಯ ಕ್ರಮ ಜರುಗಿಸಲು ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಲಾಗಿದೆ. ಅದು ನೀಡುವ ಅಭಿಪ್ರಾಯದಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.

ಕಾರ್ಖಾನೆಯ ಗುಜರಿ ವಸ್ತುಗಳ ಮಾರಾಟದಲ್ಲಿ 14 ಕೋಟಿ ರೂ.ಗಳಿಗೂ ಹೆಚ್ಚಿನ ವಂಚನೆಯನ್ನು ಎಸಗ ಲಾಗಿದ್ದು, ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದವರ ಮೇಲೆ ಸೂಕ್ತ ತನಿಖೆಯನ್ನು ನಡೆಸಲು ಉಡುಪಿ ಜಿಲ್ಲಾ ರೈತ ಸಂಘ 2023ರಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ಅವರು ತಿಳಿಸಿದರು.

ಈ ನಡುವೆ ಉಡುಪಿ ಜಿಲ್ಲಾಧಿಕಾರಿಗಳು 2024ರ ಜೂ.11ರ ಪತ್ರದಲ್ಲಿ ವಿಸ್ಕೃತವಾದ ವರದಿ ಸಲ್ಲಿಸಿದ್ದು, ಕಾರ್ಖಾನೆಯ ಹಳೆ ಯಂತ್ರೋಪಕರಣಗಳ ಟೆಂಡರ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗೆ ಸತ್ಯಾಸತ್ಯತೆ ಪರಿಶೀಲನೆ ನಡೆಸಲು ಸಮಿತಿ ರಚಿಸಿ ಜಂಟಿಯಾಗಿ ಪರಿಸೀಲಿಸಿ ತನಿಖಾ ವರದಿಯನ್ನು ಪಡೆಯಲಾಗಿದ್ದು, ಈ ಸಮಿತಿ ನೀಡಿರುವ ವರದಿಯಂತೆ ಕಾರ್ಖಾನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷಗಳಾಗಿರುವುದು ತನಿಖಾ ಹಂತದಲ್ಲೇ ಕಂಡುಬಂದಿದೆ. ಆದ್ದರಿಂದ ಇಲಾಖಾ ವಿಚಾರಣೆ ನಡೆಸು ವುದು ಸೂಕ್ತ ಎಂದು ಅಭಿಪ್ರಾಯಪಟ್ಟು ತನಿಖಾ ವರದಿಯನ್ನು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶರಿಗೆ ಸಲ್ಲಿಸಿದ್ದರು ಎಂದು ಸಚಿವರು ಉತ್ತರದಲ್ಲಿ ವಿವರಿಸಿದ್ದಾರೆ.

ಅದರಂತೆ ಇಲಾಖೆ ಅವ್ಯವಹಾರಗಳ ಆರೋಪಗಳ ತನಿಖೆ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ರಾಧಾಕೃಷ್ಣ ಹೊಳ್ಳರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದು, ಪ್ರಸ್ತುತ ಈ ವಿಚಾರಣೆಯೂ ಪ್ರಗತಿಯಲ್ಲಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments