ಭಟ್ಕಳದ ಕೋವಿಡ್-19 ಗುಣಮುಖ ಗರ್ಭಿಣಿ ಮಹಿಳೆಗೆ ಉಡುಪಿ ಜಿಲ್ಲಾಡಳಿತದಿಂದ ಮಲ್ಲಿಗೆ ಹೂ ನೀಡಿ ಭಾವನಾತ್ಮಕ ಬೀಳ್ಕೊಡುಗೆ

Spread the love

ಭಟ್ಕಳದ ಕೋವಿಡ್-19 ಗುಣಮುಖ ಗರ್ಭಿಣಿ ಮಹಿಳೆಗೆ ಉಡುಪಿ ಜಿಲ್ಲಾಡಳಿತದಿಂದ ಮಲ್ಲಿಗೆ ಹೂ ನೀಡಿ ಭಾವನಾತ್ಮಕ ಬೀಳ್ಕೊಡುಗೆ

ಉಡುಪಿ : ರಾಜ್ಯದಲ್ಲಿಯೇ ಅಪರೂಪವೆನಿಸಿದ್ದ ಭಟ್ಕಳದ ಕೋವಿಡ್ ಪಾಸಿಟಿವ್ ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖವಾಗಿ ಉಡುಪಿ ಜಿಲ್ಲೆಯ ಟಿ ಎಮ್ ಎ ಪೈ ಕೋವಿಡ್ ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆ ಹೊಂದಿದರು.

ಜಿಲ್ಲಾಡಳಿತದ ಪರವಾಗಿ ಗರ್ಭಿಣಿ ಮಹಿಳೆಯನ್ನು ಜಿಲ್ಲಾಧಿಕಾರಿ, ಜಿ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್, ಸಿಇಒ ಪ್ರೀತಿ ಗೆಹ್ಲೋಟ್ ಹಾಗೂ ಆರೋಗ್ಯ ಇಲಾಖೆಯ ಸಿಬಂದಿಗಳು ಮಲ್ಲಿಗೆ ಹೂ, ಹಣ್ಣು ಹಂಪಲು ಹಾಗೂ ಸಿಹಿ ತಿಂಡಿ ನೀಡಿ ಬಿಳ್ಕೋಟ್ಟರು.

ಈ ವೇಳೆ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಉಡುಪಿ ಜಿಲ್ಲೆ ಹೆಮ್ಮೆ ಪಡುವ ದಿನ ಇವತ್ತು. ಮಹಿಳೆ ಜೊತೆ ಮಗುವನ್ನೂ ಉಳಿಸಿದ ಖುಷಿಯಿದೆ. ಆರು ತಿಂಗಳ ಗರ್ಭಿಣಿಗೆ ಕೊರೋನಾ ಸೋಂಕು ತಗುಲಿದ್ದರಿಂದ ಮಹಿಳೆಯ ಆರೋಗ್ಯ ಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಉನ್ನತ ಮಟ್ಟದ ಚಿಕಿತ್ಸೆಗೆ ಉತ್ತರ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ಸಿಎಂ ಮತ್ತು ಚೀಫ್ ಸೆಕ್ರೇಟರಿ ಸೂಚನೆಯಂತೆ ಗರ್ಭಿಣಿಯನ್ನು ವರ್ಗಾಯಿಸಲಾಗಿತ್ತು. ಕೋವಿಡ್ ರೋಗಿಗಳ ಚಿಕಿತ್ಸೆಗೆಂದೇ ಮೀಸಲಿರುವ ಉಡುಪಿಯ ಸುಸಜ್ಜಿತ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಅವರು ಸಂಪೂರ್ಣ ಗುಣಮುಖವಾಗಿದ್ದು ಇದಕ್ಕೆ ಕಾರಣಿಕರ್ತರಾದ ವೈದ್ಯರ ತಂಡಕ್ಕೆ ಧನ್ಯವಾದಗಳು ಎಂದರು

ಮನೆಗೆ ಹೊರಟು ನಿಂತ ಮಹಿಳೆ ಮಾತನಾಡಿ, ಆರಂಭದ ಆತಂಕವನ್ನು ಟಿಎಂಎ ಪೈ ಆಸ್ಪತ್ರೆ ವೈದ್ಯರು ದೂರ ಮಾಡಿದರು. ಮನೆಯಲ್ಲೇ ಚಿಕಿತ್ಸೆ ಪಡೆದೆ ಎಂಬ ಭಾವನೆ ಬಂತು. ಕೇಳಿದ್ದನ್ನೆಲ್ಲಾ ಕೊಟ್ಟು ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದ. ದೇವರಿಚ್ಛೆ ಇದ್ದರೆ ಹೆರಿಗೆಗೆ ಉಡುಪಿಗೆ ಬರುತ್ತೇನೆ ಎಂದು ಹೇಳಿದರು. ಇದೇ ವೇಳೆ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ನೀಡಿದ ಅಪೂರ್ವ ಸೇವೆಗೆ ಗರ್ಭೀಣಿ ಮಹಿಳೆ ಧನ್ಯವಾದ ಸಮರ್ಪಿಸಿದರು.

ಗರ್ಭಿಣಿಯಾಗಿರುವ ಈ 26 ವರ್ಷದ ಮಹಿಳೆಗೆ ಉಸಿರಾಟದ ತೊಂದರೆಯಿಂದ ಆರೋಗ್ಯದಲ್ಲಿ ಏರು ಪೇರಾಗಿದ್ದು ಮಾನವೀಯ ನೆಲೆಯಲ್ಲಿ ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ತುರ್ತು ನಿಘಾ ಘಟಕಕ್ಕೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.


Spread the love