ಭಾರತ ಸರ್ವ ಜನಾಂಗಗಳ ಶಾಂತಿಯ ತೋಟ : ಮಹಮ್ಮದ್ ಸುಹಾನ್ 

Spread the love

ಭಾರತ ಸರ್ವ ಜನಾಂಗಗಳ ಶಾಂತಿಯ ತೋಟ : ಮಹಮ್ಮದ್ ಸುಹಾನ್ 

ಉಡುಪಿ: ಉದ್ಯಾವರ ಎನ್ನುವಂಥದ್ದು ಇಷ್ಟರ ತನಕ ನಮಗೆ ತಿಳಿದಿರುವ ಪ್ರಕಾರ ಸೌಹಾರ್ದತೆಗೆ ಎಲ್ಲಿಯೂ ಧಕ್ಕೆ ಆಗಲಿಲ್ಲ. ಇಲ್ಲಿ ಹಿಂದೂಗಳಿಂದ ಆಗಿರಬಹುದು, ಅಥವಾ ಕ್ರೈಸ್ತರಿಂದ ಆಗಿರಬಹುದು ಅಥವಾ ಮುಸ್ಲಿಮರಿಂದ ಆಗಿರಬಹುದು, ಇಲ್ಲಿಯ ತನಕ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿರುತ್ತಾರೆ. ಇಲ್ಲಿಯ ಹಿರಿಯರು ಉದ್ಯಾವರದ ಚುಕ್ಕಾಣಿಯನ್ನು ಜಾತಿ ಮತ ಭೇದವಿಲ್ಲದೆ ಹಿಡಿದಿರುತ್ತಾರೊ, ಅಲ್ಲಿಯ ಅಲ್ಲಿಯ ತನಕ ಉದ್ಯಾವರದಲ್ಲಿ ಸೌಹಾರ್ದತೆಗೆ ಖಂಡಿತ ಧಕ್ಕೆ ಬರುವುದಿಲ್ಲ. ಜಗತ್ತಿನಲ್ಲಿ ಸೌಹಾರ್ದತೆ ಅಲುಗಾಡುತ್ತಿದೆ. ಸೋಷಿಯಲ್ ಮಾಧ್ಯಮದ ಮೂಲಕ ನಾವು ಹಾಕುವಂತಹ ಕಮೆಂಟ್ ಗಳು ಕೆಲವೊಮ್ಮೆ ಸೌಹಾರ್ದತೆಗೆ ಧಕ್ಕೆ ತರುತ್ತದೆ. ಜಗತ್ತಿನ ಯಾವುದೇ ದೇಶಗಳನ್ನು ನಾವು ನೋಡಿದಾಗ ಅಲ್ಲಿ ಕೇವಲ ಒಂದು ಅಥವಾ ಎರಡು ಭಾಷೆಗಳು, ಮತ್ತು ಒಂದು ಅಥವಾ ಎರಡು ಜಾತಿ ಧರ್ಮಗಳು ಮಾತ್ರ ಇರುತ್ತವೆ ಆದರೆ ಸರ್ವ ಜನಾಂಗಗಳ ಶಾಂತಿಯ ತೋಟವಿದ್ದರೆ ಅದು ಭಾರತ ಮಾತ್ರ. ಎಂದು ಉಡುಪಿಯ ಅಪರ ಜಿಲ್ಲಾ ಸರಕಾರಿ ವಕೀಲರು ಆಗಿರುವಂತಹ ಮಹಮ್ಮದ್ ಸುಹಾನ್, ಸೌಹಾರ್ದ ಸಮಿತಿ ಉದ್ಯಾವರ ಇವರ ನೇತೃತ್ವದಲ್ಲಿ ಜರಗಿದ ಬಕ್ರೀದ್ ಸೌಹಾರ್ದ ಕೂಟದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು .

ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳು ಮತ್ತು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ ಆಗಿರುವ ವಂದನೀಯ ಫಾದರ್ ಸ್ಟ್ಯಾನಿ ಬಿ ಲೋಬೊ ಮಾತನಾಡಿ, ಭಾರತ ನಮ್ಮ ದೇಶ.ವೈವಿಧ್ಯತೆ ಮತ್ತು ಏಕತೆಯೇ ಭಾರತದ ಸಂಗಮ. ಹಲವು ರಾಜ್ಯಗಳು, ಆದರೆ ದೇಶವೊಂದೇ. ಹಲವು ಸಂಸ್ಕೃತಿಗಳು ಆಚರಣೆಗಳು, ಆದರೆ ಭಾವೈಕ್ಯತೆ ಒಂದೇ . ಹಬ್ಬದ ಮೂಲ ಕಾರಣ ಸೌಹಾರ್ದತೆ ಆಗಿರಬೇಕು, ಎಂದು ಶುಭ ಹಾರೈಸಿದರು.

ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಉಡುಪಿಯಲ್ಲಿ ಉಪನ್ಯಾಸಕರಾದ ನಾಗರಾಜ್ ಜಿಎಸ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿ ಶೇಖರ್ ಮತ್ತು ಹಲಿಮಾ ಸಾಬ್ಜು ಅಡಿಟೋರಿಯಂ ಉದ್ಯಾವರ ಇದರ ನಿರ್ದೇಶಕರಾದ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಸೌಹಾರ್ದ ಸಮಿತಿ ಉದ್ಯಾವರ ಅಧ್ಯಕ್ಷರಾದ ವಿಲ್ಫೆಡ್ ಡಿಸೋಜ ಅವರು ವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಆಬಿದ್ ಅಲಿ ಸ್ವಾಗತಿಸಿದರು. ಪ್ರತಾಪ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.


Spread the love