ಭಾರತ್ ಬಂದ್ ನಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಸಹಕರಿಸಿ; ಉಡುಪಿ ಜಿಲ್ಲಾ ಕಾಂಗ್ರೆಸ್ ಮನವಿ
ಉಡುಪಿ: ಸಪ್ಟೆಂಬರ್ 10ರಂದು ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಬೆಂಬಲ ನೀಡಿದ್ದು, ಸಾರ್ವಜನಿಕರು ಬಂದ್ ಗೆ ಸ್ವ ಇಚ್ಚೆಯಿಂದ ಬೆಂಬಲ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಿನಂತಿಸಿದೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಕಾಂಗ್ರೆಸ್ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇಂಧನ ಬೆಲೆ ದಾಖಲೆ ರೀತಿಯಲ್ಲಿ ಏರಿಕೆ ಕಾಣುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ತಲುಪಿದ್ದು, ಜನಸಾಮಾನ್ಯರ ಬದುಕು ಇನ್ನಷ್ಟು ದುಸ್ಥರವಾಗುತ್ತಿದೆ. ಕೇಂದ್ರ ಸರಕಾರದ ಅಸಮರ್ಪಕ ಆರ್ಥಿಕ ನೀತಿಯಿಂದ ರೂಪಾಯಿ ಮೌಲ್ಯ ಕುಸಿಯುತ್ತಿದೆ. ರೂಪಾಯಿ ಮೌಲ್ಯ ಇದೇ ರೀತಿ ಕುಸಿದರೆ ಪೆಟ್ರೋಲ್ ರೂ.100 ಗಡಿಗೆ ತಲುಪುವ ಸಾದ್ಯತೆ ಇದ್ದು ಬೆಲೆ ಏರಿಕೆಯ ನಾಗಾಲೋಟಕ್ಕೆ ಕಡಿವಾಣ ಹಾಕಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದಾಗಲೂ ದೇಶದಲ್ಲಿ ತೈಲಬೆಲೆ ಕಡಿಮೆ ಮಾಡಿಲ್ಲ. ತೈಲ ಬೆಲೆ ಏರಿಕೆಯಿಂದ ಕೇಂದ್ರ ಸರಕಾರ 11 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ. ತೈಲಬೆಲೆ ನಿತ್ಯ ಪರಿಷ್ಕರಣೆಯಾಗುವ ಪದ್ದತಿ ಪ್ರಾರಂಭ ಆದಂದಿನಿಂದ ಸರಕಾರಕ್ಕೆ ಲಾಭವಾಗಿದ್ದರೂ ತೈಲ ದರ ಇಳಿಕೆ ಮಾಡದೇ ಜನತೆಯ ಹೊರೆಯನ್ನು ನೀಗಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಬೇಕೆನ್ನುವ ಬೇಡಿಕೆಗೂ ಕೇಂದ್ರ ಮನ್ನಣೆ ನೀಡುತ್ತಿಲ್ಲ. ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು 4 ವರ್ಷ ಕಳೆದರೂ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗದೆ ಜನರ ಹಿತಾಸಕ್ತಿ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಪೆಟ್ರೊಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದ್ದು ಜನಸಾಮಾನ್ಯರ ಬದುಕು ದುಸ್ಥರವಾಗಿದೆ.
ಕೇಂದ್ರ ಸರಕಾರದ ಈ ಜನವಿರೋಧಿ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಸೆ.10 ರಂದು ಸರ್ವ ಪ್ರತಿಪಕ್ಷಗಳ ಸಹಕಾರದೊಂದಿಗೆ ಸ್ವಯಂಪ್ರೇರಿತ ಭಾರತ್ ಬಂದ್ಗೆ ಕರೆ ನೀಡಿದ್ದು, ಬಂದ್ಗೆ ಬೆಂಬಲವಾಗಿ ಜಿಲ್ಲೆಯ ಎಲ್ಲಾ ವಾಣಿಜ್ಯ ವ್ಯಾಪರಸ್ಥರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಬಂದ್ ಆಚರಿಸಿ ಪ್ರತಿಭಟನೆ ಸೂಚಿಸಬೇಕಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.