ಭಾಷೆಯ ಸಂವಹನ ವ್ಯಕ್ತಿಯನ್ನು ಬೆಳೆಸುತ್ತದೆ : ವಿನಾಯಕ ಕಾಮತ್

Spread the love

ಭಾಷೆಯ ಸಂವಹನ ವ್ಯಕ್ತಿಯನ್ನು ಬೆಳೆಸುತ್ತದೆ : ವಿನಾಯಕ ಕಾಮತ್

ನಾಡಾ ಐಟಿಐ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ.

ಕುಂದಾಪುರ : ಸಮಾಜಕ್ಕೆ ಹಾಗೂ ನಮಗೆ ವಯಕ್ತಿಕವಾಗಿ ಒಳಿತಾಗುವ ಯಾವುದೆ ಭಾವನೆ, ಸಲಹೆ, ಸೂಚನೆಗಳು ನಮ್ಮಲ್ಲಿ ಮೂಡಿದಾಗ ಅದನ್ನು ಬಹಿರಂಗವಾಗಿ ಪ್ರಕಟಪಡಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಪ್ರತಿ ವ್ಯಕ್ತಿಯಲ್ಲಿ ಆಗಾಧವಾದ ಜ್ಞಾನ ಸಂಪತ್ತು ಹುದುಗಿರುತ್ತದೆ, ಭಾಷೆಯ ಸಂವಹನದ ಮೂಲಕ ಅದನ್ನು ಉದ್ದೀಪನಗೊಳಿಸುವ ಕೆಲಸಗಳು ಆಗಬೇಕು ಎಂದು ಉಡುಪಿಯ ಆಭರಣ ಮೋಟಾರ್ಸ್ ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ ವಿನಾಯಕ ಕಾಮತ್ ಹೇಳಿದರು.

ಇಲ್ಲಿಗೆ ಸಮೀಪದ ಸಮೀಪದ ನಾಡಾ ರೇ.ಫಾ.ರೋಬರ್ಟ್ ಝಡ್.ಎಂ.ಡಿಸೋಜಾ ಐಟಿಐ ಸಂಸ್ಥೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗಾಗಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮನೋಹರ್ ಆರ್ ಕಾಮತ್ ಅವರು, ಉದ್ಯೋಗ ಹಾಗೂ ತಂತ್ರಜ್ಞಾನದಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತದಲ್ಲಿ ಐಟಿಐ ಶಿಕ್ಷಣ ಪಡೆದುಕೊಂಡಿರುವ ವಿದ್ಯಾರ್ಥಿಗಳ ಬೇಡಿಕೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರಾಯೋಗಿಕ ಹಾಗೂ ಪಠ್ಯ ತರಬೇತಿ ಪಡೆದುಕೊಂಡು ಉತ್ತಮ ಅಂಕಗಳನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ದೇಶವಲ್ಲದೆ, ವಿದೇಶದಿಂದಲೂ ಬೇಡಿಕೆಗಳು ಬರುತ್ತಿದೆ. ಎಸ್‌ಎಸ್‌ಎಲ್‌ಸಿ ಶಿಕ್ಷಣದ ನಂತರ ಕೇವಲ ಒಂದು ವರ್ಷ ಹಾಗೂ ಎರಡು ವರ್ಷದ ತರಬೇತಿಯನ್ನು ಪಡೆದುಕೊಳ್ಳುವ ಐಟಿಐ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣಾಭ್ಯಾಸವನ್ನು ಮಾಡುವುದರಿಂದ, ಪರೀಕ್ಷೆ ಮುಗಿಯುವ ಮೊದಲೇ ಉದ್ಯೋಗಾವಕಾಶದ ಬೇಡಿಕೆಗಳಿಗೆ ಒಗ್ಗಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಶೈಕ್ಷಣಿಕ ವರ್ಷದಲ್ಲಿ ನಡೆಯುತ್ತಿರುವ ಕ್ಯಾಂಪಸ್ ಸಂದರ್ಶನಗಳೇ ನಿದರ್ಶನವಾಗಿದೆ. ಬೆಂಗಳೂರಿನ ಸುರಕ್ಷಾ ಕ್ಯಾರ್, ಅಧ್ವೈತ್ ಕಿಯಾ ಮೋಟಾರ್ಸ್, ಮಂಗಳೂರಿನ ಅರವಿಂದ್ ಮೋಟಾರ್ಸ್, ಉಡುಪಿಯ ಆಭರಣ ಮೋಟಾರ್ಸ್ ಕಂಪೆನಿಗಳು ಈಗಾಗಲೇ ಕ್ಯಾಂಪಸ್ ಸಂದರ್ಶನ ನಡೆಸಿ ತರಬೇತಿಗಾಗಿ ನೇಮಕಾತಿ ಪತ್ರವನ್ನು ನೀಡಿದ್ದಾರೆ. ಮೈಸೂರು, ಬೆಂಗಳೂರಿನ ಇನ್ನೂ ಅನೇಕ ಕಂಪೆನಿಗಳು ಸಂದರ್ಶನಕ್ಕಾಗಿ ಕೋರಿಕೆ ಪತ್ರ ಕಳುಹಿಸಿದ್ದಾರೆ ಎಂದರು.

ರೇ.ಫಾ.ರೋಬರ್ಟ್ ಝಡ್.ಎಂ.ಡಿಸೋಜಾ ಐಟಿಐ ಆಡಳಿತ ಮಂಡಳಿಯ ಕಾರ್ಯದರ್ಶಿ ನವೀನ್ ಲೋಬೋ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದರು. ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ ರಾಜೇಶ್ ಕೆ.ಸಿ, ಆಭರಣ ಮೋಟಾರ್ಸ್ ಕಂಪೆನಿಯ ಉಮೇಶ್ ಶೆಟ್ಟಿ ಹಂದಾಡಿ , ಕಿರಿಯ ತರಬೇತಿ ಅಧಿಕಾರಿಗಳಾದ ಮೋಹನ್‌ಚಂದ್ರ ಪಿ ನಾಯಕ್, ಯೋಗೀಶ್ ಬಂಕೇಶ್ವರ, ದಿನೇಶ್ ಬೈಂದೂರು, ರಾಘವೇಂದ್ರ ಆಚಾರ್ ಕಟ್‌ಬೇಲ್ತೂರು ಇದ್ದರು.


Spread the love