ಭಿಕ್ಷಾಟನೆ ನೆಪದಲ್ಲಿ ಮಂಗಳಮುಖಿಯರು ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ ಸಲ್ಲದು ; ಎಸ್ಪಿ ಸಂಜೀವ್ ಪಾಟೀಲ್
ಉಡುಪಿ: ಮಂಗಳಮುಖಿಯರು ಭಿಕ್ಷಾಟನೆ ಮಾಡುವಾಗ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡುವಂತಿಲ್ಲ ಅಂತಹ ಯಾವುದೇ ಪ್ರಕರಣಗಳು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾದೀತು ಎಂದು ಎಸ್ಪಿ ಡಾ. ಸಂಜೀವ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಅವರು ಶುಕ್ರವಾರ ವಾರದ ಫೋನ್ ಇನ್ ಕಾರ್ಯಕ್ರಮದಲ್ಲಿ ಕುಂದಾಪುರದಲ್ಲಿ ಮಂಗಳಮುಖಯರ ಹಾವಳಿ ಕುರಿತು ಮತ್ತು ಭಿಕ್ಷೆ ನೀಡದೆ ಹೋದಲ್ಲಿ ಅಸಭ್ಯವಾಗಿ ವರ್ತಿಸುವ ಕುರಿತು ಮಾಡಿದ ಕರೆಗೆ ಉತ್ತರಿಸಿ ಮಾತನಾಡಿದ ಈ ಕುರಿತು ಪೋಲಿಸರು ವಿಶೇಷ ಅಭಿಯಾನ ಜಿಲ್ಲೆಯಾದ್ಯಂತ ನಡೆಸಲಿದ್ದಾರೆ. ಮಂಗಳಮುಖಯರು ಭಿಕ್ಷೆಯ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬ್ರಹ್ಮಾವರದಿಂದ ಕರೆ ಮಾಡಿದವರೊಬ್ಬರು, ನಾನು ಪರಿಚಯದ ವ್ಯಕ್ತಿಗೆ 5 ಬ್ಯಾಂಕುಗಳ ಸಾಲಗಳಿಗೆ ಜಾಮೀನು ಹಾಕಿದ್ದೇನೆ, ಆತ ಸರ್ಕಾರಿ ಉದ್ಯೋಗಿ ಆದ್ದರಿಂದ ಸಾಲ ಕಟ್ಟಬಹುದು ಎಂದು ಭಾವಿಸಿ ಜಾಮೀನು ಹಾಕಿದ್ದೆ. ಈಗ ಆತ ಸಾಲವನ್ನು ಮರುಪಾವತಿ ಮಾಡುತ್ತಿಲ್ಲ. ಬ್ಯಾಂಕಿನವರು ನನ್ನನ್ನು ಹಿಡಿದುಕೊಂಡಿದ್ದಾರೆ. ಆ ವ್ಯಕ್ತಿಗೆ ಸಾಲ ಮರುಪಾವತಿಸುವಂತೆ ಹೇಳಿದರೇ, ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ದಯವಿಟ್ಟು ಸಹಾಯ ಮಾಡಿ ಎಂದು ಗೋಗರೆದರು.
ಅದಕ್ಕೆ ಉತ್ತರಿಸಿದ ಎಸ್ಪಿ, ಸಾಲಗಾರನಿಗೆ ಜಾಮೀನು ಹಾಕುವುದು ಎಂದರೇ ಆತನ ಸಾಲಕ್ಕೆ ನಾನೇ ಜವಾಬ್ದಾರ ಎಂದು ಘೋಷಿಸಿದಂತೆ, ಕಾನೂನು ಪ್ರಕಾರ ಸಾಲಗಾರ ಸಾಲ ಕಟ್ಟದಿದ್ದರೇ ಜಾಮೀನುದಾರನೇ ಕಟ್ಟಬೇಕು, ಇದರಲ್ಲಿ ಪೋಲೀಸರೂ ಏನು ಮಾಡುವಂತಿಲ್ಲ ಎಂದರು.
ಇತ್ತೀಚೆಗೆ ಪೆರಂಪಳ್ಳಿ ರೈಲ್ವೆ ಸೇತುವೆಯ ಅಡಿಯಿಂದ ಯುವಕ ನದಿಗೆ ಹಾರಿ ಮೃತಪಟ್ಟ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಅಪಾಯಕಾರಿ ಸ್ಥಳಗಳಾದ ಸೇತುವೆಗಳ ಅಡಿಯಲ್ಲಿ ಮದ್ಯ ಸೇವಿಸಿಕೊಂಡು ಮೋಜು ಮಸ್ತಿ ಮಾಡುವವರ ವಿರುದ್ದ ಆತ್ಮಹತ್ಯೆ ಪ್ರಕರಣ ದಾಖಲಿಸಲಾಗುವುದು. ಅಪಾಯಕಾರಿಯಾಗಿರುವ ಪೆರಂಪಳ್ಳಿ ರೈಲ್ವೆ ಸೇತುವೆ ಕೆಳ ಭಾಗವು ಜನ ಹೋಗಿ ಕುಳಿತುಕೊಳ್ಳುವ ಸ್ಥಳ ಅಲ್ಲ. ಯುವಕರು ಇಲ್ಲಿ ಹೋಗಿ ಮೋಜು ಮಸ್ತಿ ಮಾಡುವುದರಿಂದ ಇಲ್ಲಿನ ನೆರೆಹೊರೆ ಮೆನಯವರಿಗೂ ತೀರಾ ತೊಂದರೆ ಯಾಗುತ್ತಿದೆ. ಈ ನಿಟ್ಟಿನಲ್ಲಿ ಈ ಪ್ರದೇಶದಲ್ಲಿ ಸದ್ಯಕ್ಕೆ ತಾತ್ಕಾಲಿಕ, ನಂತರ ಶಾಶ್ವತ ಎಚ್ಚರಿಕೆ ಬೋರ್ಡ್ ಹಾಕಲಾಗುವುದು. ಅದನ್ನು ಉಲ್ಲಂಘಿಸಿ ಹೋದವರ ವಿರುದ್ದ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಲಾಗುವುದು ಎಂದರು.ಈ ಕಾಲು ಜಾರಿ ಬಿದ್ದ 66 ಪ್ರಕರಣಗಳ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದು, ಆ ಸ್ಥಳ ಪ್ರವಾಸಿ ತಾಣವಾಗಿದ್ದು ಅಪಾಯಕಾರಿಯಾಗಿದ್ದಲ್ಲಿ ಮುಂದಿನ 10 ದಿನಗಳಲ್ಲಿ ಆ ಪ್ರದೇಶದಲ್ಲಿ ಎಚ್ಚರಿಕೆ ಬೋರ್ಡ್ ಹಾಕಲಾಗುವುದು ಎಂದು ಎಸ್ಪಿ ಹೇಳಿದರು.
ಆವರ್ಸೆಯ ಅಂಚೆ ಇಲಾಖೆಯ ಅಧಿಕಾರಿ – ಸಿಬ್ಬಂದಿಗಳು ಕಚೇರಿಯಲ್ಲಿ ಕರ್ತವ್ಯದ ವೇಳೆಯಲ್ಲಿ ರಾಜಕೀಯ ಮಾತನಾಡುತ್ತಾರೆ, ಕರ್ತವ್ಯ ಮಾಡುವುದಿಲ್ಲ ಎಂಬ ವಿಚಿತ್ರ ದೂರು ಇತ್ತು. ಉಡುಪಿ ಸೈಕ್ಲಿಂಗ್ ಕ್ಲಬ್ ನ ಸದಸ್ಯರೊಬ್ಬರು ತಮ್ಮ ಸೈಕಲಿಗೆ ವಿಡಿಯೋ ಕ್ಯಾಮರ ಸಿಕ್ಕಿಸಿ, ಮಹಿಳೆಯೊಬ್ಬರ ವೀಡಿಯೋ ಮಾಡಿ, ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ದೂರೂ ಬಂತು. ಕೊಡಿಬೆಟ್ಟು ಗ್ರಾ.ಪಂ. ಓಂತಿಬೆಟ್ಟು ಎಂಬಲ್ಲಿ ಬೀದಿ ದೀಪ ಇಲ್ಲ, ಇಲ್ಲಿ ರಾತ್ರಿ ಸಂಭವಿಸಿದ 3 ಅಪಘಾತದಲ್ಲಿ, ಮೆಸ್ಕಾಂ ಇಂಜಿನಿಯರ್ ಸೇರಿ 3 ಮಂದಿ ಸತ್ತಿದ್ದಾರೆ. ಆದರೂ ಬೀದಿ ದೀಪ ಹಾಕುತ್ತಿಲ್ಲ ಎಂದು ಒಬ್ಬರು ಅಹವಾಲು ಸಲ್ಲಿಸಿದರು.
ಈ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 26 ಕರೆಗಳು ಬಂದಿದ್ದವು. ಮರ್ಣೆ ಗ್ರಾಮ, ಇಂದಿರಾನಗರ, ಹೆಜಮಾಡಿ, ಪಡುಕರೆ ಸೇತುವೆಯ ಮೇಲೆ ಯುವಕರು ರಾತ್ರಿ ಹೊತ್ತು ಬೈಕಿನಲ್ಲಿ ಬಂದು ಕುಡಿದು ಗಲಾಟೆ ಮಾಡುತ್ತಾರೆ ಎಂದು ಸ್ಥಳೀಯರು ದೂರು ನೀಡಿದರು. ಮಣಿಪಾಲ ಮತ್ತು ಕುಂದಾಪುರದಲ್ಲಿ ಚಕ್ರಬಡ್ಡಿ ಹಾವಳಿ, ಕುಂದಾಪುರದಲ್ಲಿ ಮಂಗಳಮುಖಿಯರ ಅಶ್ಲೀಲ ಕಾಟದ ದೂರುಗಳೂ ಇದ್ದವು.
ಕಾರ್ಯಕ್ರಮದಲ್ಲಿ ಎಎಸ್ಪಿ ಮಹೇಶ್ಚಂದ್ರ, ಡಿವೈಎಸ್ಪಿ ಕುಮಾರಸ್ವಾಮಿ, ವೃತ್ತನಿರೀಕ್ಷಕ ಜೋಗಿ, ಮಣಿಪಾಲ ಎಸೈ ಸುದರ್ಶನ್, ಡಿಸಿಐಬಿ ಎಸೈ ಸಂತೋಷ್ ಕುಮಾರ್ ಮುಂತಾದವರಿದ್ದರು.