ಮಂಗಳೂರು: ಭೂಗತ ಪಾತಕಿ ಕಲಿ ಯೋಗೀಶನ ಸಹಚರರಿಬ್ಬರ ಬಂಧನ
ಮಂಗಳೂರು: ನಗರದಲ್ಲಿ ಅಪರಾಧ ಕೃತ್ಯವನ್ನು ನಡೆಸುವ ಉದ್ದೇಶದಿಂದ ಅಕ್ರಮವಾಗಿ ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದು ಗುಂಡುಗಳು, ಮಾದಕ ವಸ್ತುಗಳನ್ನು ಸಂಗ್ರಹಿಸಿದ್ದ ಕುಖ್ಯಾತ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾದ ಪೈವಳಿಕೆಯ ಹನೀಫ್ ಯಾನೆ ಅಲಿ ಮುನ್ನಾ (40) ಮತ್ತು ಮುಡಿಪು ಕುಕ್ಕುದಕಟ್ಟೆಯ ರಫೀಕ್ ಯಾನೆ ಮುಡಿಪು ರಫೀಕ್ (36) ಬಂಧಿತ ಆರೋಪಿಗಳು.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಂಗಳವಾರ ತಮ್ಮ ಕಚೇರಿಯಲ್ಲಿ ಬಂಧಿತ ಆರೋಪಿಗಳ ವಿವರ ನೀಡಿದರು. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾದ ಇವರು ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗುಂಡು, ಮಾದಕ ವಸ್ತು ಎಂಡಿಎಂಎ ಸಹಿತ ಕಾರಿನಲ್ಲಿ ಮಂಗಳೂರು ನಗರದಲ್ಲಿ ಅಪರಾಧ ಕೃತ್ಯವನ್ನು ನಡೆಸಲು ಸಂಚು ರೂಪಿಸಿ ತಿರುಗಾಡಿಕೊಂಡಿರುವ ಕುರಿತು ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಹನೀಫ್ ಈ ಹಿಂದೆ ಮಂಗಳೂರು ನಗರದ ಸಂಜೀವ ಶೆಟ್ಟಿ ಬಟ್ಟೆ ಅಂಗಡಿಯಲ್ಲಿ ಶೂಟೌಟ್ ನಡೆಸಿದ ಪ್ರಕರಣ, ಪುತ್ತೂರು ರಾಜಧಾನಿ ಜುವೆಲ್ಲರಿ ಶೂಟೌಟ್ ಪ್ರಕರಣ, ಕಾಸರಗೋಡು ಜಿಲ್ಲೆಯ ಬೇವಿಂಜೆಯ ಪಿಡಬ್ಲೂಡಿ ಕಂಟ್ರಾಕ್ಟರ್ ಮನೆಗೆ ಶೂಟೌಟ್ ನಡೆಸಿದ ಪ್ರಕರಣ ಸಹಿತ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಈತನ ವಿರುದ್ಧ ಮಂಗಳೂರು ಉತ್ತರ, ಬರ್ಕೆ, ಉಳ್ಳಾಲ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಾರಂಟ್ ಜ್ಯಾರಿಯಲ್ಲಿರುತ್ತದೆ.
ಇನ್ನೋರ್ವ ಆರೋಪಿ ಮುಡಿವು ರಫೀಕ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಮಹಿಳಾ ಠಾಣೆಯಲ್ಲಿ ಪೋಸ್ಕೋ ಪ್ರಕರಣ, ಮಂಗಳೂರು ಪೂರ್ವ ಠಾಣೆಯಲ್ಲಿ ದರೋಡೆಗೆ ಸಂಚು ರೂಪಿಸಿದ ಪ್ರಕರಣ, ಕೊಣಾಜೆ ಠಾಣೆಯಲ್ಲಿ ಅಪಹರಣ ಪ್ರಕರಣ, ದೇವಸ್ಥಾನ ಕಳವು ಪ್ರಕರಣ ಹಾಗೂ ಹಲ್ಲೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೊಲೀಸರ್ ಠಾಣೆಯಲ್ಲಿ ಕಳವು ಪ್ರಕರಣ ಹಾಗೂ ಕೇರಳದ ಮಂಜೇಶ್ವರ, ಕಣ್ಣೂರು ನಗರ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ಹೀಗೆ ಒಟ್ಟು 9 ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಡಿ ಕುಲಕರ್ಣಿ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್ ಎಂ. ಸಿಸಿಬಿ ಪಿಎಸ್‌ಐ ಯವರಾದ ನರೇಂದ್ರ, ಶರಣಪ್ಪ ಭಂಡಾರಿ, ಹರೀಶ್ ಪದವಿನಂಗಡಿ, ಎಎಸ್‌ಐ ಮೋಹನ್ ಕೆ ವಿ. ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿ ಪಾಲ್ಗೊಂಡಿದ್ದರು.