ಭೋಪಾಲ್ ಎನ್‍ಕೌಂಟರ್ ನ್ಯಾಯಾಂಗ ತನಿಖೆಯಾಗಲಿ: ತೌಸೀಫ್ ಮಡಿಕೇರಿ
ಮಂಗಳೂರು : ಭೋಪಾಲ್ ನ ಕೇಂದ್ರ ಕಾರಾಗ್ರಹದಿಂದ ಪರಾರಿಯಾಗಲು ಯತ್ನಿಸಿದ ಆರೋಪದಲ್ಲಿ ಎಂಟು ಮಂದಿ ಯುವಕರ ಎನ್‍ಕೌಂಟರ್ ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಪೋಲೀಸರು ನೀಡುವ ಬಾಲಿಶ ಸಮರ್ಥನೆಗಳು ಮತ್ತು ಈ ವಿಷಯವಾಗಿ ಹೊರಬಂದ ವೀಡಿಯೋ ತುಣುಕುಗಳು ಇದೊಂದು ಪೂರ್ವ ನಿಯೋಜಿತ ಕೃತ್ಯವೆಂಬುವುದನ್ನು ಸ್ಪಷ್ಟಪಡಿಸುವಂತಿದೆ. ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ಸರಕಾರ ಮತ್ತು ಅಧಿಕಾರಿಗಳ ಬಳಿ ಉತ್ತರವಿಲ್ಲ. ಆದ್ದರಿಂದ ಅಲ್ಲಿ ನಡೆದಿರುವ ಘಟನೆಯ ಸ್ಪಷ್ಟವಾದ ಮಾಹಿತಿ ದೇಶದ ಜನರಿಗೆ ತಿಳಿಯಬೇಕಾದರೆ ಉನ್ನತಮಟ್ಟದ ನ್ಯಾಯಾಂಗ ತನಿಖೆಯಾಗಲೇಬೇಕು ಎಂದು ಎಸ್.ಐ.ಓ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯದರ್ಶಿ ತೌಸೀಫ್ ಅಹ್ಮದ್ ಮಡಿಕೇರಿ ಆಗ್ರಹಿಸಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಎಸ್.ಐ.ಓ ಆಫ್ ಇಂಡಿಯಾ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಯೋಗದೊಂದಿಗೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಈ ಯುವಕರ ಬಳಿ ಪ್ಲೇಟ್ ಮತ್ತು ಚಮಚದ ಹೊರತು ಪಡಿಸಿ ಯಾವುದೇ ರೀತಿಯ ಮಾರಕ ಅಸ್ತ್ರಗಳಿರದಿದ್ದಾಗ ಅವರನ್ನು ಸೆರೆ ಹಿಡಿಯುವುದರ ಬದಲಾಗಿ ಏಕೆ ಕೊಲ್ಲಲಾಯಿತು? ಒಂದು ವೀಡಿಯೋ ತುಣುಕಿನಲ್ಲಿ ಪೋಲೀಸರು ಹೇಳುವ ಶಬ್ದದಲ್ಲಿ ಹಲವಾರು ಗೊಂದಲಗಳಿವೆ. ಮಧ್ಯಪ್ರದೇಶದ ಪೊಲೀಸ್ ಇಲಾಖೆ ಮತ್ತು ಸರಕಾರ ನೀಡುತ್ತಿರುವ ಹೇಳಿಕೆಯು ಸಿನಿಮಾ ಕಥೆಯಂತೆ ಆಗುತ್ತಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಜೈಲಿನಿಂದ (ISO 14001-2004) ಗರಿಷ್ಟ ಪ್ರಮಾಣದ ಆಧುನಿಕ ಭದ್ರತಾ ವ್ಯವಸ್ಥೆ ಇರುವುದರ ಮಧ್ಯೆಯೇ ಈ ಕೈದಿಗಳು ಹೇಗೆ ತಪ್ಪಿಸಲು ಸಾಧ್ಯವಾಯಿತು. ಅವರನ್ನು ತಡೆಯಲು ಒಬ್ಬ ಪೋಲೀಸರು ಪ್ರಯತ್ನಿಸುತ್ತಿದ್ದಾಗ ಬೇರೆಯವರು ಏನು ಮಾಡುತ್ತಿದ್ದರು? ಅವರನ್ನು ತಡೆಯಲು ಬೇರೆಯವರೇಕೆ ಮುಂದಾಗಲಿಲ್ಲ? ವೀಡಿಯೋ ಮತು ಫೋಟೋದಲ್ಲಿ ಈ ಎಂಟು ಯುವಕರು ಜೀನ್ಸ್, ಟೀಶರ್ಟ್ ಮತ್ತು ಶೂ ಧರಿಸಿದ್ದರು. ಇವುಗಳೆಲ್ಲ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು, ಇದಕ್ಕೆಲ್ಲಾ ಉತ್ತರ ಸಿಗಬೇಕಾದರೆ ಈಗಾಗಲೇ ಭ್ರಷ್ಟಾಚಾರ ಆರೋಪ ಎದುರಿಸಿರುವ ಎನ್ ಐ ಎ ಗೆ ನೀಡದೆ, ಸುಪ್ರೀಂ ಕೋರ್ಟಿನ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ ಎಂದರು.
ಬಳಿಕ ಮಾತನಾಡಿದ ಎಸ್ ಐ ಓ ಉಡುಪಿ ಜಿಲ್ಲಾಧ್ಯಕ್ಷ ಯಾಸೀನ್ ಕೋಡಿಬೆಂಗ್ರೆ, ಕೈದಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಾಗ ಮಾತ್ರ ಅವರಿಗೆ ಜೈಲಿನ ಬಟ್ಟೆಯ ಬದಲಿಗೆ ಬೇರೆ ರೀತಿ ಬಟ್ಟೆ ಧರಿಸಲು ಅನುಮತಿ ನೀಡುತ್ತಾರೆ. ಆದರೆ ಮಧ್ಯರಾತ್ರಿಯಲ್ಲಿ ಅದು ಅವರಿಗೆ ಹೇಗೆ ಸಿಕ್ಕಿತು. ಅವರನ್ನು ಸ್ಥಳಾಂತರಿಸುವುದಾದರೆ ಎಲ್ಲಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ಕೈದಿಗಳು ಭದ್ರತಾ ವ್ಯವಸ್ಥೆಯ ಕಣ್ಣು ತಪ್ಪಿಸಿ ಪರಾರಿಯಾದ ಸಿಸಿಟಿವಿ ಚಿತ್ರಣ ಈ ವರೆಗೂ ಸಿಗಲಿಲ್ಲ. ಇವನ್ನೆಲ್ಲಾ ನೋಡುವಾಗ ಇದೊಂದು ಪೂರ್ವ ಯೋಜಿತ ಎನ್ ಕೌಂಟರ್ ಎಂಬುದು ಕಾಮನ್ ಸೆನ್ಸ್ ಇರುವ ಜನಸಾಮಾನ್ಯರಿಗೂ ತಿಳಿಯುತ್ತದೆ. ಆದರೆ ಮಧ್ಯಪ್ರದೇಶದ ಸರಕಾರ ಮತ್ತು ಪೊಲೀಸ್ ಇಲಾಖೆಗೆ ಇಲ್ಲದಿರುವುದು ನಗೆಪಾಟಲಿಗೆ ಕಾರಣವಾಗಿದೆ ಎಂದರು.
ಕೇವಲ ಬೆಡ್ ಶೀಟ್ ಬಳಸಿ ಜೈಲಿನ ಗೋಡೆಯನ್ನು ಹಾರಿ ಬರುವುದು ಅಷ್ಟು ಸುಲಭವೇ? ಜೈಲಿನಿಂದ ಪರಾರಿಯಾದ ಮೇಲೆ ಎನ್‍ಕೌಂಟರ್ ಆಗುವ ನಡುವಿನ ಅವಧಿಯಲ್ಲಿ ಈ ಎಂಟು ಮಂದಿಯ ಕೈಗೆ ಶಸ್ತ್ರಾಸ್ತ್ರಗಳು ಬಂದಿದ್ದು ಎಲ್ಲಿಂದ ? ಮತ್ತು ಹೇಗೆ? ಎಂದು ಪ್ರಶ್ನಿಸಿದ ಎಸ್ ಐ ಓ ಕರ್ನಾಟಕ ರಾಜ್ಯಾಧ್ಯಕ್ಷ ಲಬೀದ್ ಶಾಫಿ, ಪರಾರಿಯಾಗಿ ಎಂಟು ಗಂಟೆಗಳ ಬಳಿಕ ಎಂಟು ಮಂದಿಯ ಎನ್‍ಕೌಂಟರ್ ಆಗಿದೆ. ಇಷ್ಟು ಗಂಟೆಗಳ ಕಾಲ ಅವರು ಜೈಲಿಗೆ ಸಮೀಪದ ಗ್ರಾಮದಲ್ಲೇ ಏಕೆ ಇದ್ದರು? ತಮ್ಮನ್ನು ಪೊಲೀಸರು ಹುಡುಕಿಕೊಂಡು ಬರುತ್ತಾರೆ ಎಂಬ ಜ್ಞಾನ ಅವರಿಗೆ ಇರಲಿಲ್ಲವೇ? ಪರಾರಿಯಾದ ಎಂಟೂ ಮಂದಿ ಒಟ್ಟಿಗೆ ಒಂದೇ ದಿಕ್ಕಿನಲ್ಲಿ ಓಡಿದ್ದು ಏಕೆ? ಹೀಗೆ ಹಲವಾರು ಪ್ರಶ್ನೆಗಳು ಉತ್ತರ ಸಿಗದೆ ಗೊಂದಲ ಮೂಡಿಸುತ್ತಿದೆ. ಆದ್ದರಿಂದ ಎಸ್.ಐ.ಓ, ಈ ನಕಲಿ ಎನ್‍ಕೌಂಟರ್ ಕುರಿತು ಶೀಘ್ರ ತನಿಖೆ ನಡೆಯಬೇಕು. ಇಂತಹ ನಕಲಿ ಎನ್‍ಕೌಂಟರ್ ಪ್ರಕರಣಗಳು ನಿರಂತ ಹೆಚ್ಚಾಗುತ್ತಿದ್ದು ಇದನ್ನು ತಡೆಯುವಲ್ಲಿ ಸರಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಈ ದೇಶದ ಎಲ್ಲಾ ನಾಗರಿಕರಿಗೆ ನಿರ್ಭಯವಾಗಿ ಜೀವಿಸುವ ಹಕ್ಕನ್ನು ಖಾತ್ರಿ ಪಡಿಸುವುದು ಪ್ರತಿಯೊಂದು ಸರಕಾರದ ಮತ್ತು ನ್ಯಾಯ ವ್ಯವಸ್ಥೆಯ ಕರ್ತವ್ಯವಾಗಿದೆ. ಈ ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ಐ.ಓ, ದ.ಕ. ಜಿಲ್ಲಾಧ್ಯಕ್ಷ ರಫೀಕ್ ಬೀದರ್ ಸ್ವಾಗತಿಸಿದರು. ಇರ್ಷಾದ್ ವೇಣೂರ್ ನಿರೂಪಿಸಿ, ವಂದಿಸಿದರು. ಬಳಿಕ ದ.ಕ. ಜಿಲ್ಲಾಧಿಕಾರಿಗಳ ಮೂಲಕ ಪ್ರಕರಣಕ್ಕೆ ಸಂಬಂಧಿಸಿ ಎಸ್ ಐ ಓ ನ ಕೆಲವು ಬೇಡಿಕೆಯುಳ್ಳ ಮನವಿಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಲಾಯಿತು.