ಮಂಗಳಮುಖಿಯರೊಂದಿಗೆ ಕ್ರಿಸ್ಮಸ್ ಆಚರಿಸಿದ ಮಂಗಳೂರು ಬಿಷಪ್ & ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು

Spread the love

ಮಂಗಳಮುಖಿಯರೊಂದಿಗೆ ಕ್ರಿಸ್ಮಸ್ ಆಚರಿಸಿದ ಮಂಗಳೂರು ಬಿಷಪ್ & ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು

ಮಂಗಳೂರು: ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಮತ್ತು ಸಂತ  ಅಲೋಶೀಯಸ್ ಕಾಲೇಜು ಇವರುಗಳ ಜಂಟಿ ಆಶ್ರಯದೊಂದಿಗೆ ಯೇಸುವಿನ ಜನನದ ಹಬ್ಬವಾದ ಕ್ರಿಸ್ಮಸ್ ಆಚರಣೆಯನ್ನು ಕಾಲೇಜಿನ ಮದರ್ ತೆರಸಾ ಪಾರ್ಕಿನಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.

ಕಾಲೇಜಿನ ಕ್ಯಾಂಪಸ್ ಮಿನಿಸ್ಟರ್ ವಂ| ಫೆಲಿಕ್ಸ್ ವಿಕ್ಟರ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನಾ ಅವರು ಕೇಕ್ ಕತ್ತರಿಸುವುದರ ಮೂಲಕ ಸಂಭ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಸಂದೇಶ ನೀಡಿದ ಧರ್ಮಾಧ್ಯಕ್ಷರು‘ಮನುಷ್ಯರನ್ನು ತನ್ನ ದೈವತ್ವದಲ್ಲಿ ಸೇರಿಸಿಕೊಳ್ಳಲು ದೇವರು ಮಾನವನಾಗಿ ನಮ್ಮೊಡನೆಯೇ ಜೀವಿಸಿದರು. ಆದರೆ ಮಾನವ ಶಾಶ್ವತ ಸುಖ, ಶಾಂತಿ ನೀಡುವ ದೇವರನ್ನು ತೊರೆದು, ಕ್ಷಣಿಕ ಸುಖದೆಡೆಗೆ ಮರೀಚಿಕೆಯನ್ನು ಬೆನ್ನು ಹತ್ತಿ ಹೊರಟಿದ್ದಾನೆ. ದಾರಿ ತಪ್ಪಿದ ಮನುಜನನ್ನು ದೇವರೆಡೆಗೆ ಸೆಳೆಯಲು ಬೆತ್ಲೆಹೇಮ್‌ನಲ್ಲಿ ಮನುಜನಾಗಿ ಹುಟ್ಟಿದವರು ಯೇಸು’ ಎಂದರು.

ಕ್ರೈಸ್ತ ವಿಶ್ವಾಸದ ಪ್ರಕಾರ ದೇವರೆ ನಮ್ಮ ಆದಿ ಮತ್ತು ಅಂತ್ಯ. ದೇವರಿಂದಲೇ ನಮ್ಮೆಲ್ಲರ ಉಗಮ. ದೇವರಲ್ಲಿಯೇ ನಮ್ಮ ಸಮಾಗಮ. ಈ ಸೃಷ್ಟಿಯಲ್ಲಿ ಪರರನ್ನು ಪರಿಗಣಿಸಿ, ಗೌರವಿಸಿ ಜೀವಿಸಿದಾಗಲೇ ನಿಜವಾದ ಆತ್ಮಶಾಂತಿ ಪಡೆಯಲು ಸಾಧ್ಯ. ಇದೇ ನಿಜವಾದ ಬಂಧುತ್ವ. ನಿಜವಾದ ಆಧ್ಯಾತ್ಮಿಕತೆ ಮಾನವೀಯತೆಯ ನೆಲೆ. ಅಂತಹ ಮಾನವೀಯತೆಗೆ ಯಾವುದೇ ಧರ್ಮಗಳ ಗೋಡೆಗಳಿಲ್ಲ. ಮನುಷ್ಯ ತನ್ನ ಸ್ವಾರ್ಥದಿಂದ ಸೃಷ್ಟಿಯನ್ನು ವಿಕಾರಗೊಳಿಸುತ್ತಿದ್ದಾನೆ. ಹಿಂಸೆಯ ದಾರಿ ಹಿಡಿಯುತ್ತಿದ್ದಾನೆ. ಪಾಪದ ಕೂಪದಲ್ಲಿ ಬಿದ್ದಿರುವ ಮನುಕುಲವನ್ನು ರಕ್ಷಿಸಲು, ಪ್ರಕೃತಿಯನ್ನು ರಕ್ಷಿಸಲು ಧರೆಗೆ ಬಂದವರು ಯೇಸು. ಪ್ರಕೃತಿಯ ವಿನಾಶಕರಾಗದೆ, ಸೃಷ್ಟಿಯ ಪರಿಪೂರ್ಣತೆಗೆ ಕಾರಣವಾಗೋಣ’ ಎಂದು ಹೇಳಿದರು.

ಅಲೋಶಿಯಸ್ ಶಿಕ್ಷಣ ಸಂಸ್ಥೆಯ ರೆಕ್ಟರ್ ವಂ| ದಿಯಾನಸ್ ವಾಝ್ ತಮ್ಮ ಅಧ್ಯಕ್ಷೀಯ ಸಂದೇಶದಲ್ಲಿ ಕ್ರಿಸ್ಮಸ್ ಆಚರಣೆ ಮಾನವೀಯತೆಯನ್ನು ಎಲ್ಲ ಧರ್ಮ ಸಮುದಾಯಗಳೊಂದಿಗೆ ಸಂಭ್ರಮಿಸುವುದಾಗಿದೆ. ಇಂದಿನ ಕ್ರಿಸ್ಮಸ್ ಸಂಭ್ರಮವನ್ನು ಮಂಗಳಮುಖಿಯರೊಂದಿಗೆ ಆಚರಿಸುತ್ತಿದ್ದೇವೆ. ಕ್ರಿಸ್ಮಸ್ ಆಚರಣೆ ಇಡೀ ಜಗತ್ತಿನಲ್ಲಿ ಜಾತಿ ಭೇಧ ಮರೆತು ಆಚರಿಸುತ್ತೇವೆ. ಪರಿವರ್ತನ ಚಾರಿಟೇಬಲ್ ಟ್ರಸ್ಟ್ ಮಂಗಳಮುಖಿಯರ ಏಳಿಗೆಗಾಗಿ ಮತ್ತು ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತದೆ. ಮಂಗಳಮುಖಿಯರನ್ನು ಕೀಳಾಗಿ ನೋಡದೆ ಅವರೂ ಕೂಡ ನಮ್ಮಂತೆ ಮನುಜರು ಎನ್ನುವಂತೆ ಭಾವಿಸಬೇಕು. ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನೆಲ್ಯಾಡಿಯ ವಿನ್ಸೆಂಟ್ ಮಿನೇಜಸ್ ಅವರು ಸಾಂತಾಕ್ಲಾಸ್ ವೇಷದ ಮೂಲಕ ಪ್ರತಿಯೊಬ್ಬರನ್ನು ರಂಜಿಸಿದರೆ, ವಿದ್ಯಾರ್ಥಿಗಳು ಕ್ರಿಸ್ಮಸ್ ಗೀತೆಗಳ ಮೂಲಕ ಕ್ರಿಸ್ಮಸ್ ಸಂಭ್ರಮಕ್ಕೆ ಮೆರಗು ನೀಡಿದರು.

ಕಾಲೇಜಿನ ಪ್ರಾಧ್ಯಾಪಕ ಅನೂಪ್ ವೇಗಸ್ ಧನ್ಯವಾದ ನೀಡಿದರು. ಸ್ಮೀತಾ ಫೆರ್ನಾಂಡಿಸ್ ಮತ್ತು ಸ್ವೀಡಲ್ ಪಾಯಸ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪರಿವರ್ತನಾ ಚಾರೀಟೇಬಲ್ ಟ್ರಸ್ಟಿನ ಸಂಸ್ಥಾಪಕಿ ವಾಯ್ಲೆಟ್ ಪಿರೇರಾ, ಟ್ರಸ್ಟಿನ ಅಧ್ಯಕ್ಷೆ ಸಂಜನಾ ಉಪಸ್ಥಿತರಿದ್ದರು.


Spread the love