ಮಂಗಳೂರಿನ ಅದಿತಿ-ಅಲಿನಾ ಜೋಡಿಗೆ ಬ್ಯಾಡ್ಮಿಂಟನ್ ಪ್ರಶಸ್ತಿ
ಕುಂದಾಪುರ: ಇಲ್ಲಿನ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನ ಆಶ್ರಯದಲ್ಲಿ ನಡೆದ ಅಲ್ಫ್ರೆಡ್ ಡಿಸೋಜಾ ಸ್ಮಾರಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಅದಿತಿ ಹಾಗೂ ಅಲಿನಾ ಜೋಡಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ನಡೆದ ಚಾಂಪಿಯನ್‌ಷಿಪ್‌ನ ವನಿತೆಯರ ವಿಭಾಗದಲ್ಲಿ ಅನುಭವಿ ಆಟಗಾರ್ತಿಯರಾದ ಅದಿತಿ ಆಚಾರ್ಯ ಹಾಗೂ ಅಲಿನಾ ಜೋಡಿ ಪ್ರಿಯಾ ಹಾಗೂ ರಮ್ಯ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಪುರುಷರ 85+ ಜಂಬಲ್ಸ್ ವಿಭಾಗದಲ್ಲಿ ಪ್ರತಾಪ್ ಹಾಗೂ ಪ್ರದೀಪ್ ಜೋಡಿ ಶೃಂಗೇರಿಯ ಸತೀಶ್ ಹಾಗೂ ಚೇತನ್ ಜೋಡಿಯನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪುರುಷರ ಮುಕ್ತ ವಿಭಾಗದಲ್ಲಿ ಉಡುಪಿಯ ಪ್ರಮೋದ್ ಹಾಗೂ ಶಶಾಂಕ್ ಜೋಡಿ ಕುಂದಾಪುರದ ಚೇತನ್ ಹಾಗೂ ಕಾರ್ತಿಕ್ ಜೋಡಿಯನ್ನು ಮಣಿಸಿ ಪ್ರಶಸ್ತಿ ಹಾಗೂ ನಗದು ಬಹುಮಾನ ಗೆದ್ದುಕೊಂಡಿತು.
ಕಿರಿಯರ ವಿಭಾಗದ ಫಲಿತಾಂಶ: 13 ವರ್ಷ ವಯೋಮಿತಿಯ ಬಾಲಕರ ಸಿಂಗಲ್ಸ್‌ನಲ್ಲಿ ಇಶಾನ್ ಹೆಗ್ಡೆ ಚಾಂಪಿಯನ್ ಪಟ್ಟ ಗೆದ್ದುಕೊಂಡರು, ಈ ವಿಭಾಗದಲ್ಲಿ ಆಯಾನ್ ರನ್ನರ್ಸ್ ಅಪ್ ಗೌರವಕ್ಕೆ ಪಾತ್ರರಾದರು. 13 ವರ್ಷ ವಯೋಮತಿಯ ಡಬಲ್ಸ್‌ನಲ್ಲಿ ಯಶ್ ನಿತಿನ್ ಜಾದವ್ ಹಾಗೂ ಆಯಾನ್ ಜೋಡಿ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನ ಶಯನ್ ಹಾಗೂ ಮೆಲ್ರಾನ್ ಜೋಡಿಯನ್ನು ಸೋಲಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು.
15 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮಂಗಳೂರಿನ ಗೌರವ್ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ರೆನ್ಸಿಲ್ ರನ್ನರ್ ಅಪ್‌ಗೆ ತೃಪ್ತಿಪಟ್ಟರು. ಇದೇ ವಯೋಮಿತಿಯ ಡಬಲ್ಸ್‌ನಲ್ಲಿ ಗೌರವ್ ಹಾಗೂ ರೆನ್ಸಿಲ್ ಚಾಂಪಿಯನ್ನರಾದರೆ, ಎಲ್ಡನ್ ಹಾಗೂ ಅದಿತಿ ಎರಡನೇ ಸ್ಥಾನಿಯಾದರು.
ಕುಂದಾಪುರದ ಕ್ರೀಡಾ ಪ್ರೋತ್ಸಾಹಕ ಆಲ್ಫ್ರೆಡ್ ಡಿಸೋಜಾ ಅವರ ಸ್ಮರಣಾರ್ಥ ನಡೆದ ಈ ಚಾಂಪಿಯನ್‌ಷಿಪ್‌ಗೆ ಸಂತ ಪಿಯೂಸ್ ನಗರದ ಚರ್ಚ್‌ನ ಧರ್ಮಗುರು ರೆ. ಫಾ. ಅಲ್ಬರ್ಟ್ ಕ್ರಾಸ್ತಾ ಅವರು ಚಾಲನೆ ನೀಡಿದರು. ಉಪನ್ಯಾಸಕಿ ಶರ್ಮಿಳಾ ಮೆನೆಜಸ್ ಅವರು ಅಲ್ಫ್ರೆಡ್ ಡಿಸೋಜಾ ಅವರ ಬದುಕಿನ ಕುರಿತು ಮಾತನಾಡಿದರು. ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನ ಪ್ರಧಾನ ಕೋಚ್ ಸೋಮಣ್ಣ ನಂಜಪ್ಪ ಅತಿಥಿಗಳನ್ನು ಗೌರವಿಸಿದರು. ಡೆನ್ಸಿಲ್ ಡಿಸೋಜಾ ಹಾಗೂ ಸೋಹನ್ ಡಿ ಸೋಜಾ ವಿಜೇತರಿಗೆ ಬಹುಮಾನ ವಿತರಿಸಿದರು. ಕಾಸೆಸ್ ಡಿಕೋಸ್ಟಾ, ವಿಲ್ಫ್ರೆಡ್ ಡಿ ಸೋಜಾ ಹಾಗೂ ಸೋಫಿಯಾ ಡಿ ಸೋಜಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನ ಆಡಳಿತಾಧಿಕಾರಿ ನಿಧೀಶ್ ಆಚಾರ್ಯ ವಂದಿಸಿದರು.