ಮಂಗಳೂರಿನ ಸಮಾವೇಶಕ್ಕೆ ಬೈಂದೂರಿನಿಂದ 5 ಸಾವಿರ ಮಂದಿ ಭಾಗಿ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ
ಕುಂದಾಪುರ: ಫೆಬ್ರವರಿ 17 ರಂದು ಮಂಗಳೂರಿನ ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭಾ ಕ್ಷೇತ್ರದಿಂದ 5 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಬುಧವಾರ ನಗರದ ಪ್ರೆಸ್ ಕ್ಲಬ್ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ೫ ಗ್ಯಾರಂಟಿ ಅನುಷ್ಠಾನದ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಬೃಹತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಈ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕರ್ತರಿಗೆ ಉತ್ಸಾಹ ತುಂಬಲಿದ್ದಾರೆ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಪಡುಬಿದಿರೆಯಲ್ಲಿ ಜೊತೆಯಾಗಿ ರ್ಯಾಲಿಯೊಂದಿಗೆ ಐದು ಗ್ಯಾರಂಟಿ ಟ್ಯಾಬ್ಲೋಗಳ ಮೂಲಕ ಸಮಾವೇಶದ ಮೈದಾನದಕ್ಕೆ ತೆರಳಳುವ ಬಗ್ಗೆ ತಯಾರಿ ನಡೆದಿದೆ ಎಂದರು.
ಧರ್ಮ-ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿಲ್ಲ:
ನಾನು ಹಿಂದುತ್ವದ ಮೇಲೆ ರಾಜಕಾರಣ ಮಾಡಿಲ್ಲ. ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಭಿತ್ತಿಲ್ಲ. ಜನರನ್ನು ತಪುö್ಪ ದಾರಿಗೆ ಕೊಂಡೊಯ್ಯುವ ಕೆಲಸ ಕಾಂಗ್ರೆಸ್ ಎಂದಿಗೂ ಮಾಡಿಲ್ಲ .ಕಾಂಗ್ರೆಸ್ ಪಕ್ಷದ ಜನಪರ ಕೆಲಸಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸಿದ್ದೇನೆ. ಹೀಗಾಗಿ ಚುನಾವಣೆಯಲ್ಲಿ ನನಗೆ ಸೋಲಾಯಿತು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಸುಳ್ಳು ಎಂದ ಬಿಜೆಪಿ ಇದೀಗ ಗ್ಯಾರಂಟಿಯ ಹಿಂದೆ ಬಿದ್ದಿರುವುದು ಹಾಸ್ಯಾಸ್ಪದ. ನಿರಂತರವಾಗಿ ಸುಳ್ಳು ಹೇಳಿದರೆ ಜನರು ನಂಬುತ್ತಾರೆ ಎನ್ನುವುದು ಬಿಜೆಪಿಯ ಸಿದ್ದಾಂತ. ಸತ್ಯವನ್ನು ಜನರು ಒಂದಲ್ಲಾ ಒಂದು ದಿನ ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ನಂಬಿಕೆ ಕಾಂಗ್ರೆಸ್ಗಿದೆ ಎಂದರು.
ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಗೆ ಬಿಜೆಪಿ ಮತ್ತೆ ಅಡ್ಡಗಾಲು ಹಾಕಿದೆ. ಬಿಜೆಪಿಗೆ ಅಧಿಕಾರ ದಾಹ ಎಷ್ಟಿದೆ ಎನ್ನುವುದನ್ನು ಈ ಮೂಲಕ ಜಗಜ್ಜಾಹೀರಾಗಿದೆ.
ನಿಗಮ ಮಂಡಳಿಯಲ್ಲಿ ಸ್ಥಾನ ಸಿಗುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕೆ. ಗೋಪಾಲ ಪೂಜಾರಿ, ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷ ಐದೂ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಜಿಲ್ಲೆಯಲ್ಲಿ ಪಕ್ಷ ಕಟ್ಟಬೇಕಿದ್ದರೆ ಏನಾದರೂ ಸ್ಥಾನಮಾನಗಳು ಕೊಡಬೇಕು. ಸ್ಥಾನಮಾನ ಕೊಡುವ ವಿಚಾರ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು. ಅಧಿಕಾರ ಸಿಗಲಿ, ಸಿಗದೇ ಇರಲಿ. ನಾನು ಜನರಿಗಾಗಿ ದುಡಿಯುವೆ. ಇಂದಿಗೂ ಸಾಮಾನ್ಯ ಕಾರ್ಯಕರ್ತನಾಗಿ ಜನರ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಸ್ಪಂದಿಸುತ್ತಿದ್ದೇನೆ. ಈ ಬಗ್ಗೆ ನನಗೆ ತೃಪ್ತಿ ಇದೆ ಎಂದರು.
ಜೆಪಿ ಹೆಗ್ಡೆಯವರ ಕಾರ್ಯ-ವೈಖರಿ ಖುಷಿ ಇದೆ!
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಜಯಪ್ರಕಾಶ ಹೆಗ್ಡೆ ಸ್ಪರ್ಧೆಯ ಕುರಿತ ಗೊಂದಲಗಳಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಶಿವಮೊಗ್ಗ ಹಾಗೂ ಉಡುಪಿ-ಚಿಕ್ಕಮಗಳೂರು ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹಲವರಿದ್ದಾರೆ. ಲೋಕಸಭಾ ಟಿಕೆಟ್ ಹಂಚಿಕೆ ಪಕ್ಷದ ಹೈಕಮಾಂಡ್ಗೆ ಬಿಟ್ಟ ವಿಚಾರ. ಪಕ್ಷ ಯಾರನ್ನೇ ಆಯ್ಕೆ ಮಾಡಿದರೂ ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ. ವಯಕ್ತಿಕವಾಗಿ ನನಗೂ ಕೆ. ಜಯಪ್ರಕಾಶ ಹೆಗ್ಡೆಯವರಿಗೂ ಉತ್ತಮ ಬಾಂಧವ್ಯವಿದೆ. ಜೆ.ಪಿ ಹೆಗ್ಡೆಯವರ ಕಾರ್ಯ ವೈಖರಿಯ ಬಗ್ಗೆ ನನಗೆ ಖುಷಿ ಇದೆ. ಉಡುಪಿಯಲ್ಲಿ ಪಕ್ಷ ಅವರಿಗೆ ಟಿಕೆಟ್ ಕೊಟ್ಟರೂ, ಕೊಡದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡುವೆ ಎಂದರು.
ಮಾಜಿ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇಪರ್ಡೆಯ ಕುರಿತು ಕೊನೆಗೂ ಮೌನ ಮುರಿದಿರುವ ಕೆ. ಗೋಪಾಲ ಪೂಜಾರಿ, ಸುಕುಮಾರ್ ಶೆಟ್ಟಿ ಅವರ ಕಾಂಗ್ರೆಸ್ ಸೇರ್ಪಡೆಯ ವಿಚಾರದಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಅವರು ಹೈಕಮಾಂಡ್ ಜೊತೆ ಮಾತನಾಡಿದ್ದಾರೆ. ಸ್ಥಳೀಯ ಕಾರ್ಯಕರ್ತರ ಬಳಿ ಸೇರ್ಪಡೆಯ ಬಗ್ಗೆ ಹೇಳಿಲ್ಲ. ಪಕ್ಷದ ಸಿದ್ದಾಂತ ಒಪ್ಪಿ ಯಾರೇ ಬಂದರೂ ನನ್ನ ತಕರಾರಿಲ್ಲ, ಅವರಿಗೆ ಸ್ವಾಗತವಿದೆ. ಈಗಾಗಲೇ ಹೈಕಾಂಡ್ಗೆ ನನ್ನ ಈ ನಿಲುವನ್ನು ಸ್ಪಷ್ಟಪಡಿಸಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್ ಸಮಿತಿ ಅಧ್ಯಕ್ಷ ಅರವಿಂದ ಪೂಜಾರಿ ಇದ್ದರು.