ಮಂಗಳೂರಿನಲ್ಲಿ ರಸ್ತೆಯಲ್ಲೇ ಹನುಮಾನ್ ಚಾಲೀಸ್ ಪಠಣಕ್ಕೆ ಕರೆ: ಶರಣ್ ಪಂಪ್ವೆಲ್ ವಿರುದ್ಧ ಎಫ್ಐಆರ್
ಮಂಗಳೂರು: ರಸ್ತೆಯಲ್ಲೇ ನಮಾಜ್ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಕಿಡಿಕಾರಿದ್ದ ವಿಎಚ್.ಪಿ ಮುಖಂಡ ಶರಣ್ ಪಂಪ್ವೆಲ್ ‘ಸಾಮೂಹಿಕ ಹನುಮಾನ್ ಚಾಲೀಸಾ ಪಠಣೆ ಮಾಡುವುದಾಗಿ ಹೇಳಿದ್ದರು. ಈ ಹಿನ್ನಲೆ ಶರಣ್ ಪಂಪ್ವೆಲ್ ಮೇಲೆ ಮಂಗಳೂರು ನಗರ ಸೆನ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153(a), 506 ಅಡಿ ದೂರು ದಾಖಲಾಗಿದೆ.
ಕಳೆದ ಶುಕ್ರವಾರ(ಮೇ.24) ಮಂಗಳೂರಿನ ಕಂಕನಾಡಿಯಲ್ಲಿ ಹಗಲು ವೇಳೆಯಲ್ಲಿಯೇ ನಡು ರಸ್ತೆಯಲ್ಲಿ ಮುಸ್ಲಿಂ ಯುವಕರು ನಮಾಜ್ ಮಾಡಿದ್ದರು. ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತಡೆಯಾಗಿದ್ದು, ವಾಹನ ಸವಾರರು ಯೂಟರ್ನ್ ತೆಗೆದುಕೊಂಡು ಹೋಗಿದ್ದರು. ಬಳಿಕ ನಮಾಜ್ ಮಾಡಿದ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಇದಕ್ಕೆ ವ್ಯಾಪಕ ಅಸಮಧಾನ ವ್ಯಕ್ತವಾಗಿತ್ತು. ಈ ಹಿನ್ನಲೆ ಅಪರಿಚಿತ ವ್ಯಕ್ತಿಗಳ ಮೇಲೆ ಮಂಗಳೂರಿನ ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಚುನಾವಣೆ ವೇಳೆ ರಸ್ತೆಯಲ್ಲಿ ಇಫ್ತಾರ್ ಕೂಟ ಮಾಡಿದ್ದಾಗ ಕೂಡ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ಮುಂದುವರೆದ ಭಾಗವಾಗಿ ಈಗ ರಸ್ತೆಯಲ್ಲಿ ನಮಾಜ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಮೂಲಕ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿಲ್ಲ ಅಂದರೆ ಮುಂದಿನ ದಿನಗಳಲ್ಲಿ ಅಲ್ಲಿಯೇ ಸಾಮೂಹಿಕ ಹನುಮಾನ್ ಚಾಲೀಸ್ ಪಠಣ ಮಾಡಲಾಗುವುದು ಎಂದು ವಾಗ್ದಾಳಿ ನಡೆಸಿದ್ದರು. ಈ ಹಿನ್ನಲೆ ಇದೀಗ ಪೊಲೀಸರು ಶರಣ್ ಪಂಪ್ವೆಲ್ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.