ಮಂಗಳೂರು: ಅಂತಾರಾಜ್ಯ ಕಳವು ಆರೋಪಿಗಳ ಬಂಧನ
ಮಂಗಳೂರು: ನಗರದ ಕುಲಶೇಖರದ ಕೆಎಂಎಫ್ ಡೈರಿ ಬಳಿಯಲ್ಲಿರುವ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಅಂತಾರಾಜ್ಯ ಕಳವು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಡಗು ವೀರಾಜಪೇಟೆ ಬೆಳ್ಳುರು ಗ್ರಾಮದ ಸಚಿನ್ ಮತ್ತು ಬಾಡಗಾ ಗ್ರಾಮ ನಿವಾಸಿ ನಿಶಾಂತ್ ಬಂಧಿತ ಆರೋಪಿಗಳು.
ಮೇ 11ರಂದು ಕುಲಶೇಖರ ಕೆಎಂಎಫ್ ಡೈರಿ ಬಳಿಯಿರುವ ಮನೆಗೆ ನುಗ್ಗಿದ ಕಳ್ಳರು 87.5 ಗ್ರಾಂ ಚಿನ್ನಾಭರಣ ಕಳವುಗೈದಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 4,29,500ರೂ. ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಉಪಯೋಗಿಸಿದ 7 ಲಕ್ಷ ರೂ. ಬೆಲೆಬಾಳುವ ಕಾರು ಸಹಿತ 11.30 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಸಚಿನ್ ವಿರುದ್ಧ ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ಹಾಗೂ ನಿಶಾಂತ್ ವಿರುದ್ಧ ಕೊಡಗು ಜಿಲ್ಲೆಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.
ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್ ಹಾಗೂ ಎಸಿಪಿ ಧನ್ಯಾ ನಾಯಕ್ ಸೂಚನೆಯಂತೆ ಕಂಕನಾಡಿ ಠಾಣೆಯ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸೈ ರಾಘವೇಂದ್ರ ನಾಯ್ಕ್, ಹುಸೇನಸಾಬ ಮತ್ತು ಸಿಬ್ಬಂದಿಗಳಾದ ಜಯಾನಂದ, ರಾಜೇಶ್, ರಾಘವೇಂದ್ರ, ಸಂತೋಷ್, ಪುರುಷೋತ್ತಮ, ಗಂಗಾಧರ್, ಚೇತನ್, ರಾಜೆಸಾಬ್ ಮುಲ್ಲಾ ಪಾಲ್ಗೊಂಡಿದ್ದರು.