ಮಂಗಳೂರು : ಉಳ್ಳಾಲ, ಸುರತ್ಕಲ್‌ನಲ್ಲಿ ನ.16ರಿಂದ 18ರವರೆಗೆ ನಿಷೇಧಾಜ್ಞೆ: ಮುರುಗನ್

Spread the love

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದ್ದರೂ ಉಳ್ಳಾಲ ಮತ್ತು ಸುರತ್ಕಲ್ ಪ್ರದೇಶಗಳಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನ.16ರಿಂದ 18ರವರೆಗೆ ಮೂರು ದಿನಗಳವರೆಗೆ ಉಳ್ಳಾಲ ಮತ್ತು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎಸ್.ಮುರುಗನ್ ತಿಳಿಸಿದ್ದಾರೆ.

Padil-rail-way-3arrest-16112015 (22)   ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲ ಮತ್ತು ಸುರತ್ಕಲ್ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯ ಜೊತೆ ಕ್ಷಿಪ್ರ ಕಾರ್ಯಾಚರಣೆ ಪಡೆ, ಕೆಎಸ್‌ಆರ್‌ಪಿ ತಂಡಗಳು ಕಾರ್ಯ ನಿರ್ವಹಿಸುತ್ತಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಉಳ್ಳಾಲ ಮತ್ತು ಸುರತ್ಕಲ್ ಹೊರತುಪಡಿಸಿ ಉಳಿದೆಡೆಗಳಲ್ಲಿ ನಿಷೇಧಾಜ್ಞೆಯನ್ನು ಹಿಂಪಡೆಯಲಾಗಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಕೆಲವೆಡೆ ಮದ್ಯದಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಉಳ್ಳಾಲ ಮತ್ತು ಸುರತ್ಕಲ್ ಭಾಗಗಳಲ್ಲಿ ಕೆಲವು ಅಹಿತಕರ ಘಟನೆಗಳನ್ನು ನಡೆಯುತ್ತಿರುವುದರಿಂದ ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಎಲ್ಲ ಮನೆಗಳಿಗೆ, ವ್ಯಕ್ತಿಗಳಿಗೆ ಪೊಲೀಸ್ ನಿಯೋಜನೆ ಸಾಧ್ಯವಿಲ್ಲ. ಪೊಲೀಸ್ ಇಲ್ಲದ ಜಾಗದಲ್ಲಿ, ಜನಸಂಚಾರ ಕಡಿಮೆ ಇರುವೆಡೆಗಳಲ್ಲಿ ಕಿಡಿಗೇಡಿಗಳು ದುಷ್ಕೃತ್ಯವೆಸಗುತ್ತಿದ್ದಾರೆ. ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸರೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ವಿನಂತಿಸಿದರು.

ಮಂಗಳೂರು : ವಿವಿಧ ಪ್ರಕರಣಗಳಲ್ಲಿ ಹತ್ತು ಆರೋಪಿಗಳ ಬಂಧನ

ಮಂಗಳೂರು : ನಗರದಲ್ಲಿ ನಡೆದ ದರೋಡೆ ಸಹಿತ ನಾಲ್ಕು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಹತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎಸ್. ಮುರುಗನ್ ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಜಾಲ್ ಕ್ರಾಸ್ ಬಳಿ ಸ್ಕಾರ್ಪಿಯೊ ಕಾರಿನಲ್ಲಿ ತೆರಳುತ್ತಿದ್ದ ರಾಜಸ್ಥಾನ ಮೂಲದ ಭುರರಾಮ್ ಎಂಬವರನ್ನು ಕಾರಿನಲ್ಲಿ ಬಂದ ನಾಲ್ವರು ಪಿಸ್ತೂಲ್ ತೋರಿಸಿ 1.30 ಲಕ್ಷ ನಗದು ಹಾಗೂ 1.44 ಲಕ್ಷ ವೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಕಾರ್ಪಿಯೊ ಚಾಲಕ ಬವರ್‌ಲಾಲ್, ಕಿಶೋರ್ ಕುಮಾರ್ (21), ಸಗನ್‌ಲಾಲ್ (30)ಎಂಬವರನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರು.

ಆರೋಪಿಗಳಿಂದ ಆಟಿಕೆ ಪಿಸ್ತೂಲ್, ಚೂರಿ, ಎಂಟು ಮೊಬೈಲ್, 95 ಸಾವಿರ ನಗದು ಹಾಗೂ ಸ್ಕಾರ್ಪಿಯೊ ಕಾರು ವಶಪಡಿಸಿಕೊಳ್ಳಲಾಗಿದೆ.

ಅ.2ರಂದು ಮಂಗಳೂರು ಕಾರಾಗೃಹದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮಾರಕಾಸ್ತ್ರಗಳನ್ನು ಜೈಲಿನ ಆವರಣ ಗೋಡೆಯ ಮೂಲಕ ಬೈಕ್‌ನಲ್ಲಿ ಬಂದು ಎಸೆದ ಮಹೇಶ್ ಕುಮಾರ್ (35), ಲತೀಶ್(23) ಕಮಲಾಕ್ಷ ಪೂಜಾರಿ (42), ಮಾರಕಾಸ್ತ್ರ ತಯಾರಿಸಿದ ಸತೀಶ್ ಆಚಾರ್ಯರನ್ನು ಬಂಧಿಸಲಾಗಿದೆ. ಮಾಡೂರು ಯೂಸುಫ್ ಮತ್ತು ಗಣೇಶ್ ಶೆಟ್ಟಿಯನ್ನು ಪ್ರತ್ಯೇಕ ತಂಡಗಳಾಗಿ ಹತ್ಯೆ ಮಾಡಿರುವ ಬಗ್ಗೆ ತಿಳಿದುಬಂದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ನಡುವೆ ಮಾರಾಕಾಸ್ತ್ರಗಳೊಂದಿಗೆ ಓಡಾಡುತ್ತಿದ್ದವರನ್ನು ವಿಚಾರಣೆ ಮಾಡುತ್ತಿದ್ದ ಸಂದರ್ಭ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂದರ್ ನಿವಾಸಿ ಆರಿಫ್ (29), ಜೆಪ್ಪು ಕುಡ್ಪಾಡಿ ನಿವಾಸಿ ಅಹ್ಮದ್ ಶರ್ವಾನ್ (23) ಎಂಬವರನ್ನು ಬಂಧಿಸಲಾಗಿದ್ದು ಇತರ ಆರೋಪಿಗಳ ಶೋಧ ನಡೆಯುತ್ತಿದೆ ಎಂದು ಕಮಿಷನರ್ ತಿಳಿಸಿದರು.

ಕಾವೂರು ಠಾಣೆಯಲ್ಲಿ ಜುಲೈ ತಿಂಗಳಲ್ಲಿ ನಡೆದ ಒಂಟಿ ಮಹಿಳೆ ಮೇಲೆ ಹಲ್ಲೆ ಮತ್ತು ದರೊಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ವಿನೋದ್ ಆಳ್ವ ಜೊತೆ ಕೆಲಸ ಮಾಡಿಕೊಂಡಿದ್ದ ರವಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಡಾ ಸಂಜೀವ್ ಪಾಟೀಲ್ ಉಪಸ್ಥಿತರಿದ್ದರು.


Spread the love