ಮಂಗಳೂರು : ಮಂಗಳೂರಿನ ಕಾರಾಗೃಹದಲ್ಲಿ ಧೀರ್ಘಕಾಲದಿಂದ ಇರುವ ಖೈದಿಗಳಿಗೆ ವೃತ್ತಿ ತರಬೇತಿ ಕಾರ್ಯವನ್ನು ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.
ಅವರು ಇಂದು ನಗರದ ಜೈಲಿನಲ್ಲಿ ಕಾರಾಗ್ರೃಹ ಸಂದರ್ಶನ ಮಂಡಳಿ ಸಭೆಯಲ್ಲಿ ಮಾತನಾಡುತ್ತಿದ್ದರು. ಜೈಲಿನಲ್ಲಿ ಮೊಬೈಲ್ ಜಾಮರ್ ಅಳವಡಿಕೆ ಕಾರ್ಯವನ್ನು ತ್ವರಿತವಾಗಿ ಪೂರ್ತಿಗೊಳಿಸಬೇಕು. ಜೈಲಿನ ನೀರಿನ ಘಟಕವನ್ನು ಮಹಾನಗರಪಾಲಿಕೆ ವತಿಯಿಂದ ಶುದ್ಧೀಕರಣಗೊಳಿಸುವಂತೆ ಅವರು ಸೂಚಿಸಿದರು.
ಖೈದಿಗಳಿಗೆ ನೀಡುವ ಕುಡಿಯುವ ನೀರನ್ನೂ ಶುದ್ಧೀಕರಿಸಬೇಕು. ಆಹಾರ ತಯಾರಿಕಾ ಸ್ಥಳವನ್ನು ಉತ್ತಮ ರೀತಿಯಲ್ಲಿ ಗುಣಮಟ್ಟದಿಂದ ಕಾಪಾಡಬೇಕು ಎಂದರು.
ಖೈದಿಗಳನ್ನು ನಿಯಮಿತವಾಗಿ ಕೋರ್ಟ್‍ಗೆ ಹಾಜರು ಪಡಿಸಬೇಕು. ಸತತ 3 ಬಾರಿ ವಿಚಾರಣೆಗೆ ಗೈರು ಹಾಜರಾತಿಯಾಗದಂತೆ ಕ್ರಮ ವಹಿಸಬೇಕು. ಹೊರ ಜಿಲ್ಲೆಗಳ ನ್ಯಾಯಾಲಯಕ್ಕೆ ಖೈದಿಗಳ ಹಾಜರಾತಿಯನ್ನೂ ಸಾಧ್ಯವಾದಷ್ಟು ವಿಡಿಯೋ ಕಾನ್ವೆರೆನ್ಸ್ ಮೂಲಕವೇ ನಡೆಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮಂಗಳೂರಿನ ಎಲ್ಲಾ ನ್ಯಾಯಾಲಯಗಳಲ್ಲೂ ವೀಡಿಯೋ ಕಾನ್ವೆರೆನ್ಸ್ ವ್ಯವಸ್ಥೆಗೆ ಮುತುವರ್ಜಿ ವಹಿಸಲು ತಿಳಿಸಿದರು.
ಸಭೆಯಲ್ಲಿ ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್, ಆಯುಕ್ತ ಡಾ. ಗೋಪಾಲಕೃಷ್ಣ, ಹೆಚ್ಚುವರಿ ಎಸ್‍ಪಿ ಶಾಂತಕುಮಾರ್, ಬಂಟ್ವಾಳ ಎಎಸ್‍ಪಿ ರಾಹುಲ್ ಕುಮಾರ್, ಕೇಂದ್ರ ವಿಭಾಗದ ಎ.ಸಿ.ಪಿ ಕಲ್ಯಾಣ್ ಶೆಟ್ಟಿ, ಜೈಲು ಅಧೀಕ್ಷಕ ಓಬಲೇಶಪ್ಪ ಮತ್ತಿತರರು ಇದ್ದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳೂ ಅಧಿಕಾರಿಗಳೊಂದಿಗೆ ಜೈಲಿನ ಎಲ್ಲಾ ಸೆಲ್‍ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.