ಮಂಗಳೂರು ದಸರಾ ಮೆರವಣಿಗೆ ವಿಜೃಂಭಣೆಯ ಆರಂಭ
ಮಂಗಳೂರು: ಇಲ್ಲಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ವತಿಯಿಂದ ಆಯೋಜಿಸಿರುವ ವಿಜೃಂಭಣೆಯ ಮಂಗಳೂರು ದಸರಾ ಮೆರವಣಿಗೆ ಶನಿವಾರ ಸಂಜೆ ಆರಂಭವಾಯಿತು. ಶಾರದೆ ಮತ್ತು ನವ ದುರ್ಗೆಯರ ವಿಗ್ರಹಗಳ ಮೆರವಣಿಗೆ ನಗರದ ಹಲವೆಡೆ ಸಾಗಿ ಬಂದು, ಭಾನುವಾರ ಬೆಳಿಗ್ಗೆ ಸಮಾಪ್ತಿಗೊಳ್ಳಲಿದೆ.
ದಸರಾ ಮೆರವಣಿಗೆಗೆ ಆರಂಭಕ್ಕೆ ನಗರದೆಲ್ಲೆಡೆ ಕಿಕ್ಕಿರಿದ ಜನಸಂದಣಿಕಂಡುಬಂದಿತ್ತು. ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸು ತ್ತಿದ್ದ ನಗರ ಉತ್ಸವಕ್ಕೆ ಮೆರುಗು ನೀಡಿತ್ತು. ಪೌರಾಣಿಕ ಸನ್ನಿವೇಶಗಳ ಟ್ಯಾಬ್ಲೋಗಳು, ಹುಲಿ ವೇಷದ ತಂಡಗಳು, ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಸಾಂಸ್ಕೃತಿಕ ಕಲಾತಂಡಗಳು, ತ್ರಿಶೂರಿನ ಬಣ್ಣದ ಕೊಡೆಗಳು, ಡೊಳ್ಳು ಕುಣಿತ, ಗೊಂಬೆ ಕುಣಿತ, ಕಣ್ಣೂರಿನ ಚೆಂಡೆವಾದನ, ಭಜನಾ ತಂಡಗಳು, ಕುದ್ರೋಳಿ ಕ್ಷೇತ್ರದ ಸಾಂಪ್ರದಾಯಿಕ ಚೆಂಡೆ ಹಾಗೂ ವಾದ್ಯ ಘೋಷಗಳೊಂದಿಗೆ ಕಲಾವಿದರು ಮೆರವಣಿಗೆಯನ್ನು ವರ್ಣರಂಜಿತವನ್ನಾಗಿಸಿದರು.
ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಆರಂಭಗೊಂಡ ಮೆರವಣಿಗೆಯ ವೇಳೆ ಆಹಾರ ಸಚಿವ ಯು.ಟಿ.ಖಾದರ್, ಶಾಸಕರಾದ ಐವನ್ ಡಿ’ಸೋಜ, ಜೆ. ಆರ್. ಲೋಬೊಅಖಿಲ ಭಾರತ ಬಿಲ್ಲವರ ಸಂಘದ ಅಧ್ಯಕ್ಷ ಜಯ ಸಿ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.