ಮಂಗಳೂರು: ಸಾರ್ವಜನಿಕರಿಗೆ ಹಾಗೂ ಪರಿಸರಾಸಕ್ತರಿಗೆ ಬೇಸಿಗೆ ರಜಾ ಕಾಲದ ವಾರಾಂತ್ಯದಲ್ಲಿ ವಿಶೇಷ ಕಾರ್ಯಕ್ರಮವನ್ನು ನೀಡುವ ನಿಟ್ಟಿನಲ್ಲಿ, ಪಿಲಿಕುಳ ನಿಸರ್ಗಧಾಮದಲ್ಲಿ ಕರಾವಳಿ ಹಾಗೂ ಮಲೆನಾಡಿನ ಹಲಸು, ಮಾವು ಮತ್ತಿತರ ಹಣ್ಣು ಹಂಪಲುಗಳಿಂದ ತಯಾರಿಸಲಾದ ಪೇಯ-ಪದಾರ್ಥಗಳ ಪ್ರದರ್ಶನ, ಸವಿಯುವಿಕೆ ಹಾಗೂ ಮಾರಾಟವನ್ನು ಏರ್ಪಡಿಸಲಾಗಿದೆ. ಈ ಒಂದು ವಿಶೇಷ ಕಾರ್ಯಕ್ರಮವನ್ನು ನಗರ ಪ್ರದೇಶದಲ್ಲಿ “ಪಿಲಿಕುಳ” ಆಡಳಿತದ ವತಿಯಿಂದ ಹಮ್ಮಿಕೊಂಡ ಮೊತ್ತಮೊದಲ ಕಾರ್ಯಕ್ರಮವಾಗಿರುತ್ತದೆ.
ಈ ಕಾರ್ಯಕ್ರಮವನ್ನು ದಿನಾಂಕ: 24-05-2015ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ಪಿಲಿಕುಳ ನಿಸರ್ಗಧಾಮದಲ್ಲಿ ಆಯೋಜಿಸಲಾಗಿದೆ.
ಈ ವಿಶೇಷ ಕಾರ್ಯಕ್ರಮವನ್ನು ನಮ್ಮವರೇ ಆದ ಜಗತ್ ವಿಖ್ಯಾತ ತೋಟಗಾರಿಕಾ ತಜ್ಞ ಹಾಗೂ ಉದ್ಯಮಿ, ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ: ಮನಮೋಹನ ಅತ್ತಾವರ, ಅಧ್ಯಕ್ಷರು, ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಇವರು ಉದ್ಘಾಟಿಸಲಿದ್ದಾರೆ. ಶ್ರೀಯುತರು ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಟಿಶ್ಯೂ ಕಲ್ಚರಲ್ ನಲ್ಲಿ ಸಂಶೋಧನೆ ನಡೆಸಿ, ಲ್ಯಾಬ್ ಟು ಲ್ಯಾಡ್ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿರುತ್ತಾರೆ.
ಇವರಿಗೆ ಹಲವಾರು ವಿಶ್ವವಿದ್ಯಾನಿಲಯಗಳಿಂದ “ಡಾಕ್ಟರೇಟ್ ಪದವಿಗಳು”; ರಾಜ್ಯ ಸರಕಾರದ “ರಾಜ್ಯೋತ್ಸವ ಪ್ರಶಸ್ತಿ” ಹಾಗೂ ಕರ್ನಾಟಕ ಸರಕಾರದ “ಕ್ಯಾಪ್ಟನ್ ಆಪ್ ಇಂಡಸ್ಟ್ರೀಸ್ ಅವಾರ್ಡು” ಮತ್ತಿತರ ಪ್ರಶಸ್ತಿಗಳು ಬಂದಿರುತ್ತವೆ. ಇವರು ಸಂಶೋಧನೆಯ ಟೊಮೋಟೋ, ಕ್ಯಾಪ್ಸಿಕೋನಿನ ಮಿಶ್ರ ತಳಿಗಳು, ಹಲವು ತರದ ಹೂವುಗಳ ಅನ್ವೇಷಣೆ ಮತ್ತು ಉತ್ಪಾದನೆಯಲ್ಲಿ ಪ್ರಸಿದ್ಧಿ ಪಡೆದಿರುತ್ತಾರೆ.
ಜಿಲ್ಲೆಯ ಸಾರ್ವಜನಿಕರು ಹಾಗೂ ಪರಿಸರಾಸಕ್ತ ನಾಗರಿಕರು ಈ ವಸಂತೋತ್ಸವವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಕೋರುತ್ತೇನೆ.