ಮಂಗಳೂರು: ಪಿಲಿಕುಳದಲ್ಲಿ ಗ್ರಹಗಳ ಪೆರೇಡ್ ವೀಕ್ಷಣೆ
ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜ.11ರಂದು ಸಂಜೆ 6:30 ರಿಂದ ಸಾರ್ವಜನಿಕರಿಗೆ ವಿಶೇಷ ವಿದ್ಯಮಾನವಾದ ಗ್ರಹಗಳ ಪೆರೇಡ್ ವೀಕ್ಷಿಸಲು ‘ವಿಶೇಷ ಆಕಾಶ ವೀಕ್ಷಣೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೀಕ್ಷಕರಿಗೆ ಮೊದಲಿಗೆ ನಕ್ಷತ್ರಗಳು, ನಕ್ಷತ್ರ ರಾಶಿಗಳನ್ನು ಗುರುತಿಸುವ ಬಗ್ಗೆ ಮಾಹಿತಿ ನೀಡಿ, ದೂರದರ್ಶಕಗಳ ಮೂಲಕ ಆಕಾಶದಲ್ಲಿ ಕಾಣುತ್ತಿರುವ ಗುರು ಗ್ರಹ ಮತ್ತು ಅದರ ಉಪಗ್ರಹಗಳಾದ ಅಯೋ, ಯುರೋಪಾ, ಕ್ಯಾಲಿಸ್ಟೋ ಮತ್ತು ಗ್ಯಾನಿಮೀಡ್ಗಳನ್ನು ವೀಕ್ಷಿಸಲು ಹಾಗೂ ಅವುಗಳ ಬಗ್ಗೆ ವಿವರಿಸಲಾಯಿತು.
ಶನಿ ಗ್ರಹ ಹಾಗೂ ಅದರ ವಿಶೇಷವಾದ ಉಂಗುರ, ಬೆಳ್ಳಿ ಚುಕ್ಕಿಯಂತಿರುವ ಶುಕ್ರ ಗ್ರಹ ಮತ್ತು ಮಂಗಳ ಗ್ರಹವನ್ನು ಸಹ ಆಸಕ್ತರು ನೋಡಿ ಸಂಭ್ರಮಿಸಿದರು. ಸ್ಪಷ್ಟವಾಗಿ ಕಾಣುತ್ತಿರುವ ಚಂದ್ರನ ಕುಳಿಗಳನ್ನು ದೂರದರ್ಶಕಗಳು ಆಕರ್ಷಕವಾಗಿ ತೋರಿಸಿ. ಈ ವಿದ್ಯಮಾನಗಳ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರ ವಿಷಯಗಳ ಸಂದೇಹಗಳನ್ನು ಕೇಂದ್ರದ ಸಿಬ್ಬಂದಿ ಬಗೆಹರಿಸಿದರು.
ವಿಜ್ಞಾನ ಕೇಂದ್ರದ ಕ್ಯುರೇಟರ್ ಜಗನ್ನಾಥ ಹಾಗೂ ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ನೇತೃತ್ವದಲ್ಲಿ ಶೈಕ್ಷಣಿಕ ಸಹಾಯಕಿ ರಶ್ಮಿ, ಮೆಂಟರ್ಗಳಾದ ಹೃತೀಕ್, ಆದರ್ಶ್, ಅಂಬಿಕಾ, ಸಹನಾ, ತಾಂತ್ರಿಕ ಸಿಬ್ಬಂದಿಗಳಾದ ಯತೀಶ್, ತುಕಾರಾಮ್, ವಿರುಪಾಕ್ಷಯ್ಯ, ಮಂಜುನಾಥ್, ಕಿಶೋರ್ ಕುಮಾರ್, ಗಾಯತ್ರಿ, ಶರತ್, ವಿಕ್ಟರ್ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದರು.