ಮಂಗಳೂರು ಫ್ಲಾಟ್ ನಲ್ಲಿ ವೇಶ್ಯಾವಾಟಿಕೆ: ಇಬ್ಬರ ಸೆರೆ
ಮಂಗಳೂರು : ಮಂಗಳೂರು ನಗರದ ಕೊಡಿಯಾಲ್ ಗುತ್ತು ಎಂಬಲ್ಲಿನ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳಾ ಪಿಂಪ್ ಹಾಗೂ ಇನ್ನೋರ್ವನನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಅಡ್ಯಾರ್ ಪದವು ನಿವಾಸಿ ರಿಯಾಸ್ ಅಹಮ್ಮದ್ (35) ಮತ್ತು ಮಹಿಳಾ ಪಿಂಪ್ ಎಂದು ಗುರುತಿಸಲಾಗಿದೆ.
ಫೆಬ್ರವರಿ 24ರಂದು ಮಂಗಳೂರು ಕೊಡಿಯಾಲ್ ಗುತ್ತು ಎಂಬಲ್ಲಿನ ಕುಶ ಆಪಾರ್ಟ್ ಮೆಂಟ್ನ ಫ್ಲಾಟ್ ವೊಂದರಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಮಹಿಳಾ ಪಿಂಪ್ ಹಾಗೂ ಇನ್ನೋರ್ವನನ್ನು ವಶಕ್ಕೆ ಪಡೆದುಕೊಂಡು, ಅವರ ವಶದಿಂದ ನಗದು ಹಣ ರೂ. 1800/- ಮೊಬೈಲ್ ಫೋನ್ ಹಾಗೂ ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಸೊತ್ತಿನ ಒಟ್ಟು ಮೌಲ್ಯ. ರೂ. 1,61,800/- ರೂ ಆಗಿರುತ್ತದೆ. ಆರೋಪಿಗಳ ಪೈಕಿ ಮಹಿಳೆಯು ಈ ಫ್ಲಾಟ್ ನಲ್ಲಿ ವಾಸ್ತವ್ಯವಿದ್ದು ಯುವತಿಯರನ್ನು ಈ ಫ್ಲಾಟ್ ನಲ್ಲಿ ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡು ಹಣವನ್ನು ಗಳಿಸುತ್ತಿದ್ದಳು.. ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿದ್ದ ಪಶ್ಚಿಮ ಬಂಗಾಳ ಕೊಲ್ಕತ್ತಾ ಮೂಲದ ನೊಂದ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಬರ್ಕೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ ಐ ಯವರಾದ ಶ್ಯಾಮ್ ಸುಂದರ್ , ಕಬ್ಬಾಳರಾಜ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.