ಮಂಗಳೂರು : ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಭಾನುವಾರ ಕಾಲೇಜಿನ ಯೋಜನಾ ಘಟಕ, ಶೈಕ್ಷಣಿಕ ವಿಸ್ತರಣಾ ಘಟಕ, ರೆಡ್ ಕ್ರಾಸ್ ಯೂನಿಟ್ ಹಾಗೂ ಶಿಕ್ಷಕ – ರಕ್ಷಕ ಸಂಘ, ಕಾರ್ಮಿಕ ಇಲಾಖೆ ಮಂಗಳೂರು ಮತ್ತು ಕಟ್ಟಡ ಕಾರ್ಮಿಕ ಸಂಘಟನೆ ಮಂಗಳೂರು ನಗರ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ ಹಾಗೂ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಶ್ರೀಯುತ ಡಿ.ಜಿ.ನಾಗೇಶ್, ಸಹಾಯಕ ಕಾರ್ಮಿಕ ಆಯುಕ್ತರು ಕಾರ್ಮಿಕ ಇಲಾಖೆ ಮಂಗಳೂರು, ಇವರು ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸರಕಾರದ ವಿವಿಧ ಯೋಜನೆಗಳು, ಸವಲತ್ತುಗಳು, ಮತ್ತು ಕಾಯ್ದೆಗಳು ಇದರ ಬಗ್ಗೆ ಮಾಹಿತಿಯನ್ನು ನೀಡಿ ಬೆಸೆಂಟ್ ಸಂಧ್ಯಾ ಕಾಲೇಜು ಇಂತಹ ಒಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದನ್ನು ಶ್ಲಾಘಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಯೋಗೀಶ್ ಜಪ್ಪಿನಮೊಗರು, ಪ್ರಧಾನ ಕಾರ್ಯದರ್ಶಿ ಸಿಡಬ್ಲ್ಯೂಎಫ್ಐ ಮಂಗಳೂರು ನಗರ ಸಮಿತಿ, ಇವರು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಟ್ಟಡ ಕಾರ್ಮಿಕರು ನೋಂದಾವಣೆ ಮಾಡಿದ ತಕ್ಷಣ ಹಾಗೂ ನಂತರದ ವರ್ಷಗಳಲ್ಲಿ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಿಗುವ ವಿವಿಧ ಸೌಲಭ್ಯಗಳ ಮಾಹಿತಿಯನ್ನು ಒದಗಿಸುತ್ತಾ ಕಾರ್ಮಿಕರಿಗೆ ವೈದ್ಯಕೀಯ ಭತ್ಯೆ, ವೇತನ ಭತ್ಯೆ, ಪಿಂಚಣಿ ಯೋಜನೆ, ಅಪಘಾತ ವಿಮಾ ಯೋಜನೆ, ವಿವಾಹಕ್ಕೆ ಧನ ಸಹಾಯ ಹಾಗೂ ಅವರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ, ವಿದ್ಯಾರ್ಥಿ ವೇತನ, ಮಕ್ಕಳ ವಿವಾಹಕ್ಕೂ ಧನ ಸಹಾಯ ಇತ್ಯಾದಿ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಇನ್ನೋರ್ವ ಅತಿಥಿಗಳಾದ ಶ್ರೀ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಸರಕಾರದಿಂದ ಇರುವ ಸವಲತ್ತುಗಳ ಪ್ರಾಮುಖ್ಯತೆಯನ್ನು ಹಾಗೂ ಈ ಪ್ರಯೋಜನವನ್ನು ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂಬುದನ್ನು ಬಹಳ ಸರಳವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಸೆಂಟ್ ಸಂಧ್ಯಾ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುರುಷೋತ್ತಮ ಕೊಟ್ಟಾರಿಯವರು ವಹಿಸಿಕೊಂಡು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸರಕಾರದಿಂದ ಕಟ್ಟಡ ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹೆಚ್ಚಿನ ಕಾರ್ಮಿಕರು ನೋಂದಾವಣಿ ಮಾಡಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕಾರ್ಮೆಲೀಟಾ ಗೋವಿಯಸ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಕ್ಷಣಿಕ ವಿಸ್ರರಣಾ ಘಟಕದ ಸಂಯೋಜಕರಾದ ಪ್ರೊ. ಈಶ್ವರ್ ಪೂಜಾರಿಯವರು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ-ರಕ್ಷಕ ಸಂಘದ ಸಲಹೆಗಾರರಾದ ಡಾ.ಸತೀಶ್ ಕುಮಾರ್ ಶೆಟ್ಟಿ ಇವರು ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಶ್ರೀವಿದ್ಯಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಾಧಾರಣ 150 ಕಟ್ಟಡ ಕಾರ್ಮಿಕ ಫಲಾನುಭವಿಗಳು ಪಾಲ್ಗೊಂಡಿದ್ದರು.