ಮಂಗಳೂರು: ರಾಜ್ಯ ಕಿವುಡ ಮುಖ್ಯಮಂತ್ರಿ ಹಾಗೂ ಪಾಲಿಕೆ ಮೂಕ ಮೇಯರ್ ಹೊಂದಿದೆ; ಬಿಜೆಪಿ ಪ್ರತಿಭಟನೆಯಲ್ಲಿ ಕಾರ್ಪೋರೇಟರ್ ತಿಲಕ್ ಚಂದ್ರ

Spread the love

ಮಂಗಳೂರು: ರಾಜ್ಯದಲ್ಲಿ ನಾವು ಕಿವುಡ ಮುಖ್ಯಮಂತ್ರಿಯನ್ನು ಹೊಂದಿದ್ದರೆ; ಮಹಾನಗರಪಾಲಿಕೆಯಲ್ಲಿ ಮೂಕ ಮೇಯರ್ ಅವರನ್ನು ಹೊಂದಿದ್ದೇವೆ ಎಂದು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ತಿಲಕ್ ಚಂದ್ರ ಲೇವಡಿ ಮಾಡಿದ್ದಾರೆ.

ಅವರು ಮಂಗಳವಾರ ಮಹಾನಗರಪಾಲಿಕೆಯ ಅಭಿವೃದ್ಧಿ ವೈಫಲ್ಯಗಳ ವಿರುದ್ದ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

4-bjp-protest-20151006-003 3-bjp-protest-20151006-002 2-bjp-protest-20151006-001 5-bjp-protest-20151006-004

ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಜನರ ಸಮಸ್ಯೆಗಳನ್ನು ಆಲಿಸಲು ಅಸಮರ್ಥರಾಗಿದ್ದು, ನಗರಪಾಲಿಕೆಯ ಮೇಯರ್ ಅವರು ನಗರ ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದರೂ ಕೂಡ ಅದನ್ನು ಪರಿಹರಿಸಲು ಅವರು ಅಸಮರ್ಥರಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು ಬಿಜೆಪಿ ಪಕ್ಷ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದ್ದು ತಾವು ಅದನ್ನು ಹೆಚ್ಚಿಸಲು ಬಿಡುವುದಿಲ್ಲ ಎಂದಿದ್ದರು ಆದರೆ ಕಾಂಗ್ರೆಸ್ ಪಕ್ಷ ಹಾಗೂ ಪೂಜಾರಿ ಅದನ್ನು ಮರೆತಿದ್ದಾರೆ. 200 ರೂ ತೆರಿಗೆ ಪಾವತಿಸುತ್ತಿದ್ದ ವ್ಯಕ್ತಿ ಈಗ 400 ರೂಗಳ ತೆರಿಗೆಯನ್ನು ಪಾವತಿಸಬೇಕಾಗಿದೆ. ಕಾಂಗ್ರೆಸ್ ಪಕ್ಷ ಜನರನ್ನು ಸಂಪೂರ್ಣವಾಗಿ ಸಮಸ್ಯೆಗೆ ನೂಕಿದ್ದು, ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು.

ಇನ್ನೋರ್ವ ಕಾರ್ಪೊರೇಟರ್ ಪ್ರೇಮಾನಂದ ಮಾತನಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಗುಂಪು ರಾಜಕೀಯ ಹೆಚ್ಚಾಗಿದ್ದು, ಒಂದು ವರುಷಗಳ ಮೇಯರ್ ಇಲ್ಲದೆ ಪಾಲಿಕೆ ಇತ್ತು, ಮೇಯರ್ ಆಯ್ಕೆ ಬಳೀಕ ಕಮೀಷನರ್ ವರ್ಗಾವಣೆಗೊಂಡರು. ಇದರಿಂದಾಗಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಹಿನ್ನಡೆಯಾಗಲು ಕಾರಣವಾಗಿದೆ. ಆಡಳಿತ ಪಕ್ಷದ ಒಳಜಗಳದಿಂದಾಗಿ ಪುರಭವನದ ಕಾಮಗಾರಿ ಇನ್ನೂ ಕೂಡ ಮುಗಿದಿಲ್ಲ. ರಸ್ತೆಗಳು ಸಂಪೂರ್ಣ ಹೊಂಡಮಯವಾಗಿದ್ದು, ಸರಿಯಾದ ಪುಟ್ ಪಾತ್ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿದೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರ ಮಾತನ್ನು ಯಾರೂ ಕೇಳುತ್ತಿಲ್ಲ, ಜನಾರ್ದನ ಪೂಜಾರಿ ಅವರು ನಗರಪಾಲಿಕೆಯ ಕಮಿಷನರ್ ಹೆಬ್ಸಿಬಾ ರಾಣಿ ಅವರನ್ನು ವರ್ಗಾಯಿಸಲು ಬಿಡುವುದಿಲ್ಲ ಎಂದು ಹೇಳಿದ್ದರು ಆದರೆ ಅವರ ಮಾತಿಗೆ ಬೆಲೆಯ ನೀಡದ ಪಕ್ಷ ಹೆಬ್ಸಿಬಾ ಹಾಗೂ ಇತರ ನಿಷ್ಟಾವಂತ ಅಧಿಕಾರಿಗಳನ್ನೂ ಕೂಡ ವರ್ಗಾಯಿಸಿದೆ. ಶಾಸಕರು ಹಾಗೂ ಮೇಯರ್ ಕೂಡ ನಗರದ ಸಮಸ್ಯೆಗಳತ್ತ ಗಮನ ಹರಿಸಿ ಸೂಕ್ತ ಫುಟ್ ಪಾತ್ ವ್ಯವಸ್ಥೆಯನ್ನು ಮಾಡಿಕೊಡಬೇಕು ಇದಕ್ಕೆ ತಪ್ಪಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾರ್ಪೋರೇಟರ್ ರೂಪಾ ಡಿ ಬಂಗೇರ, ರವಿಶಂಕರ್ ಮಿಜಾರ್, ಸುಧೀರ್ ಶೆಟ್ಟಿ, ವೇದವ್ಯಾಸ ಕುಮಾರ್, ಡಾ ಭರತ್ ಶೆಟ್ಟಿ, ಸತೀಶ್ ಪ್ರಭು, ದೀವಾಕರ್ ಮತ್ತು ಭಾಸ್ಕರ್ ಚಂದ್ರ ಇನ್ನಿತರರು ಉಪಸ್ಥಿತರಿದ್ದರು.


Spread the love