ಮಂಗಳೂರು: ಬಿಲ್ಡರ್ ಹತ್ಯೆ ಯತ್ನ ರೌಡಿ ಸೆರೆ; ಜಪಾನ್ ಮಂಗ ಬಂಧಿತ ಆರೋಪಿ

Spread the love

ಮಂಗಳೂರು: ದಿನಾಂಕ: 10-09-2015 ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆಯಲ್ಲಿ ಯತೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಲಾನ್ಸಿ ಡಿ ಸೋಜಾ ಎಂಬಾತನಿಗೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಪ್ರಮುಖ 3 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಪೋಲಿಸ್ ಕಮೀಷನರ್ ಎಸ್ ಮುರುಗನ್ ಹೇಳಿದರು.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುರುಗನ್ ಆರೋಪಿಗಳನ್ನು ಸಪ್ಟೆಂಬರ್ 21 ರಂದು ಬಿ.ಸಿ ರೋಡ್ ನ ಮೆಲ್ಕಾರ್ ಬಳಿಯಿಂದ ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ  ಪಡೆದಿದ್ದು, ಆರೋಪಿಗಳನ್ನು ಉಳ್ಳಾಲ ನಿವಾಸಿ ಚೋನಿ ಯಾನೆ ಕೇಶವ ಪೂಜಾರಿ (25), ಮೋಗವೀರಪಟ್ನ ನಿವಾಸಿ ಪ್ರಸಾದ್ ಯಾನೆ ಪಚ್ಚು (24), ಉಳ್ಳಾಲ ನಿವಾಸಿ ರಕ್ಷಿತ್ ಯಾನೆ ಡಿಕೆ (22) ಎಂದು ಗುರುತಿಸಲಾಗಿದೆ.

2014 ನೇ ಆಗೋಸ್ತ್ ತಿಂಗಳಲ್ಲಿ ತೊಕ್ಕೊಟ್ಟು ಮಾಯ ಬಾರ್ ನಲ್ಲಿ ರಾತ್ರಿ ಸಮಯ ಯತೀಶ್  ಪೂಜಾರಿ ಎಂಬಾತನು  ಇದ್ದ ಸಮಯ ಉದಯ @ ಉದಯರಾಜ್ ಮತ್ತು ಲಾನ್ಸಿ ಡಿ ಸೋಜಾನು ಯತೀಶ್ ಪೂಜಾರಿಯ ಕೊಲೆ ನಡೆಸಿದ್ದು, ಈ ಕೊಲೆಗೆ ಪ್ರತಿಕಾರವಾಗಿ ಲಾನ್ಸಿ ಡಿ ಸೋಜಾ ಎಂಬಾತನಿಗೆ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿದೆ. ಗಂಭೀರ ಗಾಯಗೊಂಡ ಲಾನ್ಸಿ ಡಿ ಸೋಜಾನು ಈಗ  ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾನೆ ಎಂದು ಮುರುಗನ್ ಹೇಳಿದರು. ಚೋನಿ ವಿರುದ್ದು 5 ಪ್ರಕರಣಗಳು ದಾಖಲಾಗಿದ್ದರೆ, ಪ್ರಸಾದ್ ವಿರುದ್ದ 3 ಪ್ರಕರಣಗಳು ಹಾಗೂ ರಕ್ಷಿತ್ ಎಂಬಾತನ ವಿರುದ್ದ ಒಂದು ಪ್ರಕರಣ ದಾಖಲಾಗಿದೆ ಎಂದರು.

ಪೊಲೀಸ್ ಕಮೀಷನರ್ ಶ್ರೀ.ಎಸ್.ಮುರುಗನ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಶ್ರೀ.ಕೆ.ಎಂ. ಶಾಂತರಾಜು ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ  ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು  ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

ಬಿಲ್ಡರ್ ಹತ್ಯೆ ಯತ್ನ ರೌಡಿ ಸೆರೆ; ಜಪಾನ್ ಮಂಗ ಬಂಧಿತ ಆರೋಪಿ

ನಗರದ ಪ್ರತಿಷ್ಟಿತ ಬಿಲ್ಡರ್ ಹಾಗೂ ಉದ್ಯಮಿ ಹತ್ಯೆಗೆ ಸಂಚು ಹೂಡಿ, ವಿಫಲ ಯತ್ನಗೈದ ಕುಖ್ಯಾತ ರೌಡಿಯೊಬ್ಬನನ್ನು ಮಂಗಳೂರು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.

ಮಂಗಳೂರು ನಗರದ ಎಂ.ಜಿ ರಸ್ತೆಯಲ್ಲಿ ರಿಯಲ್ ಎಸ್ಟೆಟ್ ಉದ್ಯಮ ನಡೆಸುತ್ತಿರುವ ುದ್ಯಮಿಯನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು.

ಮೂಲತಃ ತಮಿಳುನಾಡಿನವನಾಗಿದ್ದು, ಅಲ್ಲಿಂದ ಶಿವಮೊಗ್ಗದಲ್ಲಿದ್ದು, ಕೆಲ ವರ್ಷಗಳಿಂದ ಕುಂಜತ್ತಬೈಲಿನಲ್ಲಿರುವ ರಾಜು ಅಲಿಯಾಸ್ ಜಪಾನ್ ಮಂಗ(24) ಬಂಧಿತ. ಈತನನ್ನು ನಗರದ ಚಿಲಿಂಬಿ ಬಳಿಯಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇತರ ಮೂವರು ಪರಾರಿಯಾಗಿದ್ದು ಅವರ ಶೋಧ ನಡೆಸಲಾಗುತ್ತಿದೆ ಎಂದು ಪೋಲಿಸ್ ಆಯುಕ್ತ ಮುರುಗನ್ ಹೇಳಿದ್ದಾರೆ.


Spread the love