ಮಂಗಳೂರು: ವಿಟ್ಲದ ವ್ಯಾಪಾರಿ ಎಂ ಸುಭಾಶ್ಚಂದ್ರ ನಾಯಕ್ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಪಿಸ್ತೂಲ್ ತೋರಿಸಿ 4.10 ಲಕ್ಷ ರೂಪಾಯಿ ದರೋಡೆ ಮಾಡಿದ್ದವರನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಕೊಣಾಜೆಯಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಾಮಕೃಷ್ಣ, ಸುಜಿತ್ ಭಂಡಾರಿ, ಶ್ರೇಯಾಂಶ ಜೈನ್, ಮಂಜುನಾಥ್, ನಾಗೇಶ್ ಹಾಗೂ ಅಮಲ್ ರಾಜ್ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಅಕ್ಟೋಬರ್ 5ರಂದು ರಾತ್ರಿ ಸುಮಾರು 8.15 ಗಂಟೆ ಸಮಯಕ್ಕೆ ಎಂ.ಸುಭಾಶ್ಚಂದ್ರ ನಾಯಕ್ ವಿಟ್ಲ ಪೇಟೆಯಲ್ಲಿರುವ ತನ್ನ ಜೀನಸು ಅಂಗಡಿಯ ಬಾಗಿಲು ಮುಚ್ಚಿ ವ್ಯಾಪಾರದಿಂದ ಬಂದ ನಗದು ರೂ4.10,700/- ನ್ನು ಒಂದು ಕಪ್ಪು ಬಣ್ಣದ ಬ್ಯಾಗಿನಲ್ಲಿ ಹಾಕಿ ತನ್ನ ಕಾರು ನಂಬ್ರ: KA-19-MB-7582 ನೇಯದರ ಎದುರು ಭಾಗದ ಸೀಟಿನಲ್ಲಿ ಇಟ್ಟು ಮನೆಗೆ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ವಿಟ್ಲ ಸರಕಾರಿ ಆಸ್ಪತ್ರೆಯ ಬಳಿ ತಿರುವು ರಸ್ತೆಯಲ್ಲಿ KA-19-AA-2448 ನೇ ಬಿಳಿ ಬಣ್ಣದ ಟಾಟಾ ಸುಮೋ ವಾಹನದಲ್ಲಿ ಬಂದ 5 ಜನ ಆರೋಪಿಗಳು ಟಾಟಾ ಸುಮೊವನ್ನು ಎಂ.ಸುಭಾಶ್ಚಂದ್ರ ನಾಯಕ್ ಕಾರಿಗೆ ಅಡ್ಡವಾಗಿ ನಿಲ್ಲಿಸಿ, ಟಾಟಾ ಸುಮೋ ವಾಹನದಲ್ಲಿದ್ದ 4 ಜನರು ಇಳಿದು ಬಂದು ನಮ್ಮ ಗಾಡಿಗೆ ನಿನ್ನ ಕಾರು ಢಿಕ್ಕಿಯಾಗಿದೆ, ಕಣ್ಣು ಕಾಣುವುದಿಲ್ಲವೆ? ಎಂದು ಬೈದು ಅವರಲ್ಲಿ ಒಬ್ಬನು ಕೈಯಲ್ಲಿ ಪಿಸ್ತೂಲಿನಂತೆ ಇದ್ದ ಆಯುಧದಿಂದ ಎಂ.ಸುಭಾಶ್ಚಂದ್ರ ನಾಯಕ್ ರವರ ಎದೆಗೆ ಗುರಿ ಇಟ್ಟು ಉಳಿದವರು ಕಾರಿನಲ್ಲಿದ್ದ ಹಣ ತುಂಬಿದ ಬ್ಯಾಗನ್ನು ಎಳೆದುಕೊಂಡು ಹೋಗಿದ್ದರು.
ಈ ಕುರಿತು ವಿಟ್ಟ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ವಿಟ್ಲ ಪೊಲೀಸರು, ಜಿಲ್ಲಾ ಕಂಟ್ರೋಲ್ ರೂಂ ಗೆ ವಿಷಯ ತಿಳಿಸಿ ನಂತರ ವಿಟ್ಲ ಠಾಣಾ.ಪಿ.ಎಸ್.ಐ ಹಾಗೂ ಸಿಬ್ಬಂದಿಗಳು, ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಸದ್ರಿ ದರೋಡೆಕೋರರ ವಾಹನವನ್ನು ಹಿಂಬಾಲಿಸಿಕೊಂಡು ಹೋಗಿದ್ದು, ಜಿಲ್ಲಾ ಕಂಟ್ರೋಲ್ ರೂಂ ನವರು ನಿಸ್ತಂತು ಮುಖೇನ ಎಲ್ಲಾ ಪೊಲೀಸ್ ಠಾಣೆಗಳಿಗೆ ವಿಷಯ ರವಾನಿಸಿದ್ದು ನಿಸ್ತಂತು ಮುಖೇನ ವಿಷಯ ತಿಳಿದುಕೊಂಡ ಉಳ್ಳಾಲ ಪೊಲೀಸ್ ಠಾಣಾ ಪಿ.ಎಸ್.ಐ ಭಾರತಿ ಮತ್ತು ಸಿಬ್ಬಂದಿಗಳು ಹಾಗೂ ಕೊಣಾಜೆ ಠಾಣಾ ಪಿ.ಎಸ್.ಐ ಸುಧಾಕರ್ ಮತ್ತು ಸಿಬ್ಬಂದಿಗಳು ದರೋಡೆಕೋರರ ಟಾಟಾ ಸುಮೋ ವಾಹನವನ್ನು ಕೊಣಾಜೆಯಲ್ಲಿ ಅಡ್ಡ ಹಾಕಿ 5 ಜನ ದರೋಡೆಕೋರರ ತಂಡವನ್ನು ದಸ್ತಗಿರಿ ಮಾಡಿ ವಾಹನದಲ್ಲಿದ್ದ ದರೋಡೆಕೋರರು ದರೊಡೆಗೈದ ರೂ 4.10,700/- ನ್ನು ಹಾಗೂ ದರೊಡೆಗೈಯಲು ಉಪಯೋಗಿಸಿದ ಪಿಸ್ತೂಲ್ ಹಾಗೂ ಟಾಟಾ ಸುಮೋ ವಾಹನವನ್ನು ವಶಕ್ಕೆ ಪಡಕೊಂಡಿರುವುದಾಗಿದೆ.
ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಶರಣಪ್ಪ, ಎಸ್.ಡಿ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿನ್ಸಂಟ್ ಶಾಂತ ಕುಮಾರ್, ಬಂಟ್ವಾಳ ಉಪ ವಿಭಾಗದ ಎ.ಎಸ್.ಪಿ. ರಾಹುಲ್ ಕುಮಾರ್, ಐಪಿಎಸ್, ಇವರ ನಿರ್ದೇಶನದಂತೆ ತನಿಖಾಧಿಕಾರಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಾದ ಕೆ.ಯು.ಬೆಳ್ಳಿಯಪ್ಪ, ಡಿ.ಸಿ.ಐ.ಬಿ ಪಿಐ ಅಮಾನುಲ್ಲಾ, ಉಳ್ಳಾಲ ಪಿ.ಎಸ್.ಐ ಭಾರತಿ ಮತ್ತು ಸಿಬ್ಬಂದಿಗಳು, ಕೊಣಾಜೆ ಠಾಣಾ ಪಿ.ಎಸ್.ಐ ಸುಧಾಕರ ಮತ್ತು ಸಿಬ್ಬಂದಿಗಳು, ವಿಟ್ಲ ಠಾಣಾ ಪಿ.ಎಸ್.ಐ. ಪ್ರಕಾಶ್ ದೇವಾಡಿಗ ಸಿಬ್ಬಂದಿಗಳಾದ ಎ.ಎಸ್.ಐ ಕೊರಗಪ್ಪ, ಬಾಲಕೃಷ್ಣ ಗೌಡ,ಜಿನ್ನಪ್ಪ ಗೌಡ, ಚಾಮಯ್ಯ, ಪ್ರವೀಣ್ ರೈ, ಸತೀಶ್, ಜನಾರ್ಧನ, ಲೋಕೇಶ್, ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ರಕ್ಷಿತ್.ಎ.ಕೆ ಹಾಗೂ ಸಿಬ್ಬಂದಿಗಳಾದ ಜಗದೀಶ, ಲಕ್ಷ್ಮಣ,ಬಂಟ್ವಾಳ ನಗರ ಠಾಣಾ ಪಿ.ಎಸ್.ಐ ನಂದಕುಮಾರ್.ಎಂ.ಎಂ ಹಾಗೂ ಸಿಬ್ಬಂದಿಗಳಾದ ಡಿ.ಸಿ.ಐ.ಬಿ. ವಿಭಾಗದ ಸಿಬ್ಬಂದಿಗಳಾದ ಎ.ಎಸ್.ಐ. ಸಂಜೀವ ಪುರುಷ, ಸಿಬ್ಬಂದಿಗಳಾದ ಪಳನಿವೇಲು, ಉದಯ ರೈ, ತಾರಾನಾಥ, ವೃತ್ತ ಕಚೇರಿಯ ಸಿಬ್ಬಂದಿಗಳಾದ ಗಿರೀಶ, ವಾಸು ನಾಯ್ಕ, ನರೇಶ್ ಕುಮಾರ್, ಚಾಲಕರಾದ ವಿಜಯೇಶ್ವರ, ಯೋಗೀಶ, ವಿಜಯಗೌಡ, ಮಹೇಶ್, ಪ್ರವೀಣ್ ರವರು ಸದರಿ ಪ್ರಕರಣವನ್ನು ಭೇದಿಸುವಲ್ಲಿ ಸಹಕರಿಸಿರುತ್ತಾರೆ.
ಘಟನೆ ನಡೆದು ಕೇವಲ 01 ಗಂಟೆಯ ಅವಧಿಯಲ್ಲಿ ದರೋಡೆಗೈಯಲ್ಪಟ್ಟ ಸೊತ್ತು ಹಾಗೂ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣವನ್ನು ಬೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಗಳನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ. ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಸಿಬ್ಬಂದಿಯವರಿಗೆ ಪ್ರಶಂಸನಾ ಪತ್ರ ನೀಡುತ್ತಿದ್ದು, ಸೂಕ್ತ ನಗದು ಬಹುಮಾನ ನೀಡಲಾಗುವುದು ಎಂದು ಪೋಲಿಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.