ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಲೂಟಿಗೆ ಯತ್ನ : ಮೂವರು ವಶಕ್ಕೆ
ಮಂಗಳೂರು : ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಿಮಾನ ಯಾನಿಯೊಬ್ಬನನ್ನು ಲೂಟಿಗೆ ಯತ್ನಿಸಿದ ಘಟನೆ ರವಿವಾರ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮಸ್ಕತ್ನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಹಮ್ಮದ್ ಶಮ್ಮಾಝ್ ಎಂಬವರು ಇಮಿಗ್ರೇಶನ್ ಮತ್ತು ಕಸ್ಟಮ್ಸ್ ಪರಿಶೀಲನೆಗೊಳಗಾದ ಬಳಿಕ ಮನೆಗೆ ಹೋಗಲು ಟ್ಯಾಕ್ಸಿಗಾಗಿ ಕಾಯುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಮೂವರು ‘ತಾವು ಕಸ್ಟಮ್ಸ್ ಅಧಿಕಾರಿಗಳು’ ಎಂದು ಹೇಳಿಕೊಂಡು ಮುಹಮ್ಮದ್ ಶಮ್ಮಾಝ್ರ ಪಾಸ್ಪೋರ್ಟ್ ಪಡೆದುಕೊಳ್ಳುತ್ತಾರೆ. ಅಲ್ಲದೆ, ಇತರ ದಾಖಲೆಗಳನ್ನೂ ಕೇಳುತ್ತಾರೆ. ಇದರಿಂದ ಸಂಶಯಗೊಂಡ ಶಮ್ಮಾಝ್ ತಕ್ಷಣ ಒಳಗೆ ಹೋಗಿ ಅಲ್ಲಿನ ಅಧಿಕಾರಿಗಳ ಗಮನ ಸೆಳೆಯುತ್ತಾರೆ. ಅದನ್ನು ಗಮನಿಸಿದ ರಿಯಾಝ್, ಮುಹಮ್ಮದ್ ಸಾಹೇಬ್ ಕರಾಬೋ, ಖಾಝಿ ಅಫ್ತಾಬ್ ಎಂಬವರು ಅಲ್ಲಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಅಷ್ಟರಲ್ಲಿ ಕರ್ತವ್ಯನಿರತ ಪೊಲೀಸರು ತಕ್ಷಣ ಬೆನ್ನೆಟ್ಟಿ ಮೂವರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಸಮರ್ಪಕ ತನಿಖೆ ನಡೆಸುವ ಸಲುವಾಗಿ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಬಂದ ಮೂವರು ಆರೋಪಿಗಳಲ್ಲದೆ, ಮಸ್ಕತ್ನಿಂದ ಮಂಗಳೂರಿಗೆ ಬಂದ ಶಮ್ಮಾಝ್ ರನ್ನೂ ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಳಿಕ ನಾಲ್ಕು ಮಂದಿಯನ್ನೂ ವಿಚಾರಣೆಗಾಗಿ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.