ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಶುಲ್ಕಗಳನ್ನು ಏಕ ಪಕ್ಷೀಯವಾಗಿ, ಅತಿಯಾಗಿ ಏರಿಸಿರುವುದನ್ನು ಇಳಿಸುವಂತೆ ಒತ್ತಾಯಿಸಿ ಎನ್ ಎಸ್ ಯು ಐ ಸಂಘಟನೆಯ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತ್ತಿಚಿನ ವರ್ಷಗಳಲ್ಲಿ ವಿವಿಧ ರೀತಿಯ ಶುಲ್ಕಗಳನ್ನು ಪದವಿ ಹಾಗೂ ಸ್ನಾತಕೋತ್ತರ ಮಟ್ಟದಲ್ಲಿ ಅತಿಯಾಗಿ ಏರಿಸಲಾಗುತ್ತಿದ್ದು, ದುಬಾರಿ ಶುಲ್ಕವನ್ನು ಭರಿಸಲಾಗದೆ ಅರ್ಹ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. ವಿಶ್ವವಿದ್ಯಾನಿಲಯವು ರಾಜ್ಯ ಸರಕಾರದಿಂದ ಸ್ಥಾಪಿಸಲಾದ ಸಂಸ್ಥೆಯಾಗಿದ್ದು ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಸಾಕಷ್ಟು ಧನಸಹಾಯ ನೀಡಲಾಗುತ್ತದೆ. ಖಾಸಗಿ ಸಂಸ್ಥೆಗಳಲ್ಲಿನ ಶುಲ್ಕವನ್ನು ಭರಿಸಲಾಗದ ವಿದ್ಯಾರ್ಥಿಗಳು ಈ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆಯಲು ಬರುತ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮೀರಿಸುವಂತೆ ಶುಲ್ಕವನ್ನು ಏರಿಸಲಾಗುತ್ತಿದೆ. ಇದರಿಂದ ಉನ್ನತ ಶಿಕ್ಷಣವೆನ್ನುವುದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದೆ.
ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯ ಏಕಪಕ್ಷೀಯವಾಗಿ ಶುಲ್ಕಗಳನ್ನು ಏರಿಸುತ್ತಿದ್ದು, ಪ್ರತಿಭಟನೆ ನಡೆಸಿದಾಗ ಸ್ವಲ್ಪ ಇಳಿಸಿದಂತೆ ಮಾಡಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ರಾಜ್ಯ ಸರಕಾರ ಸರಕಾರಿ ಕಾಲೇಜುಗಳಲ್ಲಿ ಸಮರ್ಥನೀಯವಾಗಿ ಶುಲ್ಕಗಳನ್ನುಏರಿಸುತ್ತಿದ್ದು, ಮಂಗಳೂರು ವಿಶ್ವವಿದ್ಯಾನಿಲಯ ಕೂಡ ಅದೇ ರೀತಿ ಶುಲ್ಕವನ್ನು ನಿಗದಿಪಡಿಸಬೇಕು. ಪ್ರತಿ ವಿಧ್ಯಾರ್ಥಿಗೆ ವಿಶ್ವವಿದ್ಯಾನಿಲಯ ಆಯಾ ಕೋರ್ಸಿಗೆ ಸಂಬಂಧಿಸಿದ ಶುಲ್ಕದೊಂದಿಗೆ ಪ್ರವೇಶಾತಿ, ನೋಂದಣಿ, ಅಂಕಪಟ್ಟಿ, ಕ್ರೀಡಾ, ಇಂಟರ್ನೆಟ್ ಇತ್ಯಾದಿ ಶುಲ್ಕಗಳನ್ನು ವಿಧಿಸುತ್ತದೆ. ಈ ಶುಲ್ಕಗಳು ಇತರ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಶುಲ್ಕಗಳು ಅತೀ ದುಬಾರಿಯಾಗಿದೆ. ಆದ್ದರಿಂದ ವಿಶ್ವವಿದ್ಯಾನಿಲಯ ಕೂಡಲೇ ಈ ಕುರಿತು ವಾಸ್ತಾವಾಂಶಗಳನ್ನು ಮನಗಂಡು ಶುಲ್ಕವನ್ನು ಪುನರ್ ವಿಮರ್ಶಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎನ್ ಎಸ್ ಯು ಐ ಸಂಘಟನೆ ತೀವ್ರವಾದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಈ ಸಂಧರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಅಶ್ವಿನ್ ಜಿ ಪಿರೇರಾ, ಮನಮೋಹನ್ ಜೋಯಿಸ್, ಮಿಲಾಝ್ ಅತ್ತಾವರ, ರಿಜ್ವಾನ್, ಸವಾದ್, ಅಝ್ವಿನ್, ಗ್ಲೆನ್ ಇನ್ನಿತರರು ಉಪಸ್ಥಿತರಿದ್ದರು.