ಮಂಗಳೂರು: ವ್ಯಕ್ತಿ ಬದುಕಿದ್ದರೂ ಮೃತಪಟ್ಟಿದ್ದಾರೆಂದು ಮಾಹಿತಿ ರವಾನಿಸಿದ ಪೊಲೀಸರು!

Spread the love

ಮಂಗಳೂರು: ವ್ಯಕ್ತಿ ಬದುಕಿದ್ದರೂ ಮೃತಪಟ್ಟಿದ್ದಾರೆಂದು ಮಾಹಿತಿ ರವಾನಿಸಿದ ಪೊಲೀಸರು!

ಮಂಗಳೂರು: ಅನಾರೋಗ್ಯ ಕಾರಣದಿಂದ ಮಂಗಳೂರು ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಉಪ್ಪಿನಂಗಡಿಯ ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾರೆಂಬ ತಪ್ಪು ಮಾಹಿತಿ ಇಡೀ ಕುಟುಂಬದ ಶೋಕಾಚರಣೆಗೆ ಕಾರಣವಾಗಿದ್ದು, ಇದರಲ್ಲಿ ಮಂಗಳೂರಿನ ಪಾಂಡೇಶ್ವರ ಪೊಲೀಸರೇ ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ.

ಉಪ್ಪಿನಂಗಡಿ ಆರ್ಪಿಲ ನಿವಾಸಿ ಶೇಖ‌ರ್ ಗೌಡ(55) ಸುದ್ದಿಯ ಕೇಂದ್ರ ಬಿಂದುವಾದವರು. ಅವರನ್ನು ಅನಾರೋ ಗ್ಯದ ಹಿನ್ನೆಲೆಯಲ್ಲಿ ಜೂ.9ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ಆದರೆ ಆರೋಗ್ಯದಲ್ಲಿ ಸುಧಾ ರಣೆಯಾಗದ ಕಾರಣ ಜೂ.15ರಂದು ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೇಖರ ಗೌಡ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಅವರ ವಾರೀಸುದಾರರಿಗೆ ಮಾಹಿತಿ ನೀಡಲು ವೆನ್ನಾಕ್‌ನಲ್ಲಿರುವ ಪೊಲೀಸ್ ಔಟ್‌ ಪೋಸ್ಟ್‌ಗೆ ತಿಳಿಸಲಾಗಿತ್ತು. ಅದರಂತೆ ಔಟ್‌ಪೋಸ್ಟ್ ದಾಖಲೆ ಪುಸ್ತಕದಲ್ಲಿ ‘ಶೇಖರ್ ಗೌಡ ಅರೆಪ್ರಜ್ಞಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ನಮೂದಿಸಿ ವೆನ್ಲಾಕ್ ಮಾಹಿತಿ ಪ್ರತಿಯನ್ನು ಪಾಂಡೇಶ್ವರ ಠಾಣೆಗೆ ರವಾನಿಸಲಾಗಿದೆ.

ವೆನ್ಲಾಕ್ ನಿಂದ ಪಾಂಡೇಶ್ವರಕ್ಕೆ ಕಳುಹಿಸಲಾದ ಮಾಹಿತಿಯ ಪ್ರತಿಯನ್ನು ಸ್ಕ್ಯಾನ್ ಮಾಡಿದ ಪಾಂಡೇಶ್ವರ ಪೊಲೀಸ್ ಸಿಬ್ಬಂದಿ ‘ಶೇಖರ್ ಗೌಡ ಮೃತಪಟ್ಟಿದ್ದಾರೆಂಬ’ ಮಾಹಿತಿಯನ್ನು ಟೈಪ್ ಮಾಡಿ ಧರ್ಮಸ್ಥಳ ಠಾಣೆಗೆ ಇಮೇಲ್ ಮುಖಾಂತರ ಕಳುಹಿಸಿದ್ದಾರೆ. ಇದನ್ನು ನೋಡಿದ ಧರ್ಮಸ್ಥಳ ಪೊಲೀಸರು ಶೇಖರ್ ಗೌಡರ ಸಂಬಂಧಿಕರಿಗೆ ವೆನ್ಲಾಕ್ ಗೆ ದಾಖಲಾದ ಶೇಖರ್ ಗೌಡ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಶೇಖರ್ ಗೌಡರ ಕುಟುಂಬಿಕರು ಧರ್ಮಸ್ಥಳ ಪೊಲೀಸರೊಂದಿಗೆ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಬಂದು ನೋಡಿದಾಗ ಶವ ಇರಲಿಲ್ಲ.

ಈ ಬಗ್ಗೆ ಗೊಂದಲ ಉಂಟಾಗಿ ತುಂಬಾ ಹೊತ್ತು ಪರಿಶೀಲನೆ ನಡೆಸಿದರು. ಬಳಿಕ ಶೇಖರ್ ಗೌಡರು ದಾಖಲಾಗಿದ್ದ ವೆನ್ಸಾಕ್ ಆಸ್ಪತ್ರೆಯ ಮೂರನೇ ಮಹಡಿಯಲ್ಲಿದ್ದ ಬೆಡ್‌ಗೆ ಹೋಗಿ ನೋಡಿದಾಗ ಶೇಖರ್ ಗೌಡ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನು ನೋಡಿ ಪೊಲೀಸರು, ಕುಟುಂಬ ಸದಸ್ಯರು ನಿಟ್ಟುಸಿರು ಬಿಟ್ಟರು. ಪಾಂಡೇಶ್ವರ ಪೊಲೀಸರ ನಿರ್ಲಕ್ಷ್ಯದಿಂದ ಕುಟುಂಬಸ್ಥರು ಕೆಲ‌ಕಾಲ ಅತಂಕ ಪಡುವಂತಾಯ್ತು.


Spread the love