ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ಕುಖ್ಯಾತ ಅಂತಾರಾಜ್ಯ ಕ್ರಿಮಿನಲ್ ಗಳ ಸೆರೆ

Spread the love

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ಕುಖ್ಯಾತ ಅಂತಾರಾಜ್ಯ ಕ್ರಿಮಿನಲ್ ಗಳ ಸೆರೆ

ಮಂಗಳೂರು:  ಸಿಸಿಬಿ ಪೊಲೀಸರು ನಡೆಸಿದ 3 ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕ ವಸ್ತು ಹಾಗೂ ಅಕ್ರಮ ಪಿಸ್ತೂಲ್ ಸಾಗಾಟ/ಮಾರಾಟಕ್ಕೆ ಸಂಬಂಧಪಟ್ಟಂತೆ ಕೇರಳ- ಕರ್ನಾಟಕ ರಾಜ್ಯಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ 5 ಮಂದಿ ಕುಖ್ಯಾತ ಅಂತಾರಾಜ್ಯ ಕ್ರಿಮಿನಲ್ ಗಳನ್ನು ದಸ್ತಗಿರಿ ಮಾಡಿ 3 ಪಿಸ್ತೂಲ್ ಗಳು, 6 ಸಜೀವ ಮದ್ದುಗುಂಡುಗಳು ಹಾಗೂ 12:895 ಕೆಜಿ ಗಾಂಜಾ, 3 ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.

ಪ್ರಕರಣ-1: ಮಾರ್ಚ್ 12 ರಂದು ಮಂಗಳೂರು ನಗರದ ನಾಟೆಕಲ್ ಪರಿಸರದಲ್ಲಿ KL-14-G-9080 ಸ್ಕಾರ್ಪಿಯೋ ಕಾರೊಂದು ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಕಾರಿನಲ್ಲಿದ್ದ ಕಾಸರಗೋಡು ನಿವಾಸಿಗಳಾದ  ನೌಫಲ್(38),  ಮನ್ಸೂರ್(36), ಎಂಬವರನ್ನು ದಸ್ತಗಿರಿ ಮಾಡಿ ಅವರ ವಶದಿಂದ 2 ಪಿಸ್ತೂಲ್ ಗಳು, 4 ಸಜೀವ ಮದ್ದುಗುಂಡುಗಳು, ಮೊಬೈಲ್ ಫೋನುಗಳು-2, ಹಾಗೂ KL-14-G-9080 ಸ್ಥಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ 14,60,000/- ಆಗಬಹುದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿ ನೌಫಲ್ ಎಂಬಾತನ ವಿರುದ್ಧ ಈ ಹಿಂದೆ ಕೇರಳ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಸಾಗಾಟ/ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ. ಇನ್ನೋರ್ವ ಆರೋಪಿ ಮನ್ಸೂರ್ ಎಂಬಾತನ ವಿರುದ್ಧ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣ-2: ಮಾರ್ಚ್ 12   ರಂದು ಕೇರಳದಿಂದ ಮಂಗಳೂರು ನಗರಕ್ಕೆ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಕೆಂಪು ಬಣ್ಣದ ಕಾರೊಂದರಲ್ಲಿ ಸಾಗಾಟ ಮಾಡಿಕೊಂಡು ಮಂಗಳೂರು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ನಗರದ ಅರ್ಕುಳದಲ್ಲಿ ಕಾರನ್ನು ಪತ್ತೆ ಹಚ್ಚಿ ಕಾರಿನಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಆರೋಪಿ ಕಾಸರಗೋಡು ನಿವಾಸಿ  ಅಬ್ದುಲ್ ಲತೀಫ್ © ತೋಕು ಲತೀಪ್(29),  ಎಂಬಾತನನ್ನು ದಸ್ತಗಿರಿ ಮಾಡಿ ಆತನು ಚಲಾಯಿಸುತ್ತಿದ್ದ ಕೆಂಪು ಬಣ್ಣದ ಸ್ಟಿಫ್ ಕಾರು ನಂಬ್ರ: KL-10-BC-6548 ರಲ್ಲಿ ಸಾಗಾಟ ಮಾಡುತ್ತಿದ್ದ 12.895 ಕೆಜಿ ಗಾಂಜಾ, ಮೊಬೈಲ್ ಫೋನ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 15,70,000/- ಆಗಬಹುದು ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿ ಅಬ್ದುಲ್ ಲತೀಫ್ @ ತೋಕ್ ಲತೀಫ್ ಎಂಬಾತನು ಇತ್ತೀಚೆಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗೆ ಪಿಸ್ತೂಲ್ ನ್ನು ನೀಡಿದ ಆರೋಪಿಯಾಗಿರುತ್ತಾನೆ. ಅಲ್ಲದೇ 2024 ನೇ ಇಸವಿಯಲ್ಲಿ ಉಳ್ಳಾಲದಲ್ಲಿ ದಾಖಲಾದ ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪಿ ಅಸ್ಕರ್ ಎಂಬಾತನಿಗೂ ಕೂಡಾ ಈತನು ಪಿಸ್ತೂಲ್ ನ್ನು ಮಾರಾಟ ಮಾಡಿದ್ದು, ಈ ಪ್ರಕರಣಗಳಲ್ಲಿ ಈತನು ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಈ ಹಿಂದೆ ಕೇರಳ ಹಾಗೂ ಕರ್ನಾಟಕ ರಾಜ್ಯದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ, ಹಲ್ಲೆ, ದರೋಡೆ, ಕೊಲೆಯತ್ನ, ಕೊಲೆ ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿರುತ್ತದೆ.

ಪ್ರಕರಣ-3: ಮಾರ್ಚ್ 13 ರಂದು   ಕರ್ನಾಟಕ- ಕೇರಳ ಗಡಿಭಾಗದ ತಲಪಾಡಿ ಪರಿಸರದಲ್ಲಿ ಮಹಾರಾಷ್ಟ್ರ ನೊಂದಾಣೆ ಸಂಖ್ಯೆ: MH-02-BT-2287 ನೇ ಬಿಳಿ ಬಣ್ಣದ ವೋಕ್ಸ್ ವ್ಯಾಗನ್ ಪೋಲೋ ಕಾರಿನಲ್ಲಿ ಆರೋಪಿಗಳಿಬ್ಬರು ಯಾವುದೋ ಕೃತ್ಯವೆಸಗಲು ಸಂಚು ರೂಪಿಸಿ ತಿರುಗಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ತಲಪಾಡಿ ದೇವಿಪುರದ ಬಳಿ ಕಾರನ್ನು ಪತ್ತೆ ಹಚ್ಚಿ ಆರೋಪಿಗಳಾದ ಕಾಸರಗೋಡು ನಿವಾಸಿ  ಮೊಹಮ್ಮದ್ ಅಸ್ಲರ್(27),  ಮತ್ತು ಮೊಹಮ್ಮದ್ ಸಾಲಿ(31),  ಎಂಬವರನ್ನು ಪತ್ತೆ ಹಚ್ಚಿ ಆರೋಪಿಗಳ ವಶದಿಂದ ಪಿಸ್ತೂಲ್-1, ಸಜೀವ ಮದ್ದುಗುಂಡುಗಳು-2. ಮೊಬೈಲ್ ಫೋನುಗಳು-2 ಹಾಗೂ MH-02-BT-2287 ನೇ ವೋಕ್ಸ್ ವ್ಯಾಗನ್ ಪೋಲೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ ರೂ. 10,20,000/- ಆಗಬಹುದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಗಳ ಪೈಕಿ ಮೊಹಮ್ಮದ್ ಅಸ್ಲರ್ ಎಂಬಾತನ ವಿರುದ್ಧ ಹಲ್ಲೆ, ದರೋಡೆ, ಕೊಲೆಯತ್ನ ಹಾಗೂ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಕೇರಳ ಹಾಗೂ ಕರ್ನಾಟಕ ರಾಜ್ಯದಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿರುತ್ತದೆ.

ಇನ್ನೋರ್ವ ಆರೋಪಿ ಮೊಹಮ್ಮದ್ ಸಾಲಿ ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ, ಹಲ್ಲೆ, ಕೊಲೆ ಯತ್ನ, ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಪಟ್ಟಂತೆ ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತದೆ.

ಮೇಲ್ಕಂಡ 3 ಪ್ರಕರಣಗಳಲ್ಲಿ ಒಟ್ಟು 3 ಪಿಸ್ತೂಲ್ ಗಳು, ಸಜೀವ ಮದ್ದು ಗುಂಡುಗಳು-6, 12.895 ಕೆಜಿ ಗಾಂಜಾ, 5 ಮೊಬೈಲ್ ಫೋನುಗಳು ಹಾಗೂ 3 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 40,50,000/-ಆಗಬಹುದು. ಈ ಪ್ರಕರಣಗಳಲ್ಲಿ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ಈ ಪ್ರಕರಣಗಳ ಪತ್ತೆ ಕಾರ್ಯವನ್ನು  ಪೊಲೀಸ್ ಆಯುಕ್ತರಾದ  ಅನುಪಮ್ ಅಗ್ರವಾಲ್ IPS ರವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರು( ಕಾನೂನು & ಸುವ್ಯವಸ್ಥೆ ವಿಭಾಗ) ರವರಾದ  ಸಿದ್ದಾರ್ಥ ಗೋಯಲ್, IPS ಮತ್ತು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ ವಿಭಾಗ) ರವರಾದ  ಕೆ. ರವಿಶಂಕರ್, KSPS ರವರ ನಿರ್ದೇಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ ರವರ ನೇತೃತ್ವದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ ಎಂ. ಪಿಎಸ್‌ಐ ಶರಣಪ್ಪ ಭಂಡಾರಿ ಹಾಗೂ ಎಎಸ್‌ಐ ಯವರಾದ ಮೋಹನ್ ಕೆ ವಿ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.


Spread the love
Subscribe
Notify of

0 Comments
Inline Feedbacks
View all comments