ಮಂಗಳೂರು: ಸೇತುವೆಗಳ ಪಕ್ಕದಲ್ಲಿ ಸಿ.ಸಿ ಟಿವಿ ಅಳವಡಿಕೆ – ಸಚಿವ ದಿನೇಶ್ ಗುಂಡೂರಾವ್ ಸೂಚನೆ 

Spread the love

ಮಂಗಳೂರು: ಸೇತುವೆಗಳ ಪಕ್ಕದಲ್ಲಿ ಸಿ.ಸಿ ಟಿವಿ ಅಳವಡಿಕೆ – ಸಚಿವ ದಿನೇಶ್ ಗುಂಡೂರಾವ್ ಸೂಚನೆ 

ಮಂಗಳೂರು: ಹೆದ್ದಾರಿ ಹಾಗೂ ಮುಖ್ಯ ರಸ್ತೆಗಳಲ್ಲಿ ಬರುವ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗಳ ಎರಡು ಬದಿಗಳಲ್ಲಿ ಸಿ.ಸಿ ಟಿವಿ ಅಳವಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಅವರು ಬುಧವಾರ ಪೆÇಳಲಿ-ಅಡ್ಡೂರು ರಾಜ್ಯ ಹೆದ್ದಾರಿಯ ಸೇತುವೆಯ ಬಲಗೊಳಿಸುವ ಕಾಮಗಾರಿಯನ್ನು ವೀಕ್ಷಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ನದಿಗಳ ಸೇತುವೆಗಳ ಆಸು ಪಾಸಿನಲ್ಲಿ ಮರಳನ್ನು ಎತ್ತುವುದರಿಂದ ಸೇತುವೆಗಳು ದುರ್ಬಲವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಸೇತುವೆಯ 500 ಮೀಟರ್ ವ್ಯಾಪ್ತಿಯಲ್ಲಿ ಮರಳನ್ನು ತೆಗೆಯಬಾರದೆಂಬ ನಿಯಮ ಇದೆ. ಇತ್ತೀಚಿನ ದಿನಗಳಲ್ಲಿ ಸೇತುವೆಯ ಅಕ್ಕ ಪಕ್ಕದಲ್ಲಿ ಮರಳುಗಾರಿಕೆಯಿಂದ ಸೇತುವೆಗಳು ದುರ್ಬಲಗೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಸೇತುವೆಗಳ ರಕ್ಷಣೆಗೆ ಅಡ್ಡೂರು ಸೇತುವೆ ಸೇರಿದಂತೆ ಎಲ್ಲಾ ಪ್ರಮುಖ ಸೇತುವೆಗಳ ಎರಡು ಬದಿಗಳಲ್ಲಿ ಸಿಸಿ ಟಿವಿ ಅಳವಡಿಸಿ ನಿರಂತರವಾಗಿ ನಿಗಾ ವಹಿಸುವಂತೆ ಸಚಿವರು ಸೂಚಿಸಿದರು.

ಅಡ್ಡೂರು ಸೇತುವೆ ಬಲಗೊಳಿಸುವ ಕಾಮಗಾರಿ ಸುಮಾರು 6.10 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಇಲ್ಲಿ ಪ್ರತ್ಯೇಕವಾಗಿ ಹೊಸ ಸೇತುವೆ ನಿರ್ಮಿಸಬೇಕೆಂಬ ಸಾರ್ವಜನಿಕರ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಮಾಜಿ ಸಚಿವ ರಮಾನಾಥ ರೈ ಮತ್ತಿತರರು ಉಪಸ್ಥಿತರಿದ್ದರು.


Spread the love