ಮಂಗಳೂರು : ಚಾಲನೆಯಲ್ಲಿಲ್ಲದೆ, ನಿಂತಿರುವ ಹಳೆಯ ಸರಕಾರಿ ವಾಹನಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.
ಅವರು ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮನ್ವಯ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನೇಕ ಸರಕಾರಿ ಕಚೇರಿಗಳ ಆವರಣದಲ್ಲಿ ಚಾಲನೆಯಲ್ಲಿಲ್ಲದ ಹಳೆಯ ಸರಕಾರಿ ವಾಹನಗಳನ್ನು ನಿಲ್ಲಿಸಲಾಗಿದೆ. ಇದರಿಂದ ಇವುಗಳ ಭದ್ರತೆಯೊಂದಿಗೆ ಪರಿಸರದ ಸ್ವಚ್ಛತೆಗೂ ಧಕ್ಕೆಯಾಗುತ್ತಿದೆ. ಅಲ್ಲದೆ, ಸಾರ್ವಜನಿಕರೂ ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಇಲಾಖಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ 15 ವರ್ಷ ಹಳೆಯದಾದ ವಾಹನಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ರಸ್ತೆ ಬದಿಗಳಲ್ಲಿ ಕೇಬಲ್ ಅಳವಡಿಸಲು ವಿವಿಧ ಸಂಸ್ಥೆಗಳು ಪದೇ ಪದೇ ಗುಂಡಿ ತೋಡುವುದರಿಂದ ಸಾರ್ವಜನಿಕರಿಗೆ ತೊಂದರೆಗಳಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ನೀರು, ಒಳಚರಂಡಿ, ವಿದ್ಯುತ್, ದೂರವಾಣಿ ಸೇರಿದಂತೆ ಎಲ್ಲಾ ವಿಧದ ಕೇಬಲ್ಗಳನ್ನು ಭೂಗತ ಅಳವಡಿಸಲು ಒಂದು ನಿರ್ದಿಷ್ಟವಾದ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಸಂಬಂಧ ಮಹಾನಗರಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಗಳು ಜಂಟಿಯಾಗಿ ಪ್ರಸ್ತಾವನೆ ಸಿದ್ಧಗೊಳಿಸಿ ಸಲ್ಲಿಸುವಂತೆ ಅವರು ಸೂಚಿಸಿದರು.
ಮಳೆಗಾಲ ಆರಂಭವಾಗುತ್ತಿರುವುದರಿಂದ ಎಲ್ಲಾ ರಸ್ತೆ ಮತ್ತು ಚರಂಡಿಗಳನ್ನು ಸುಸ್ಥಿತಿಯಲ್ಲಿರಿಸಿಬೇಕು. ಶಾಸಕರು ಮತ್ತು ಸಂಸದರ ಅನುದಾನದಿಂದ ನಡೆಸಲ್ಪಡುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು ಎಂದು ಎ.ಬಿ. ಇಬ್ರಾಹಿಂ ತಿಳಿಸಿದರು.
ಬಂಟ್ವಾಳ ತಾಲೂಕಿನ ಶಂಭೂರು ಎಎಂಆರ್ ಡ್ಯಾಂನಿಂದ ಯಾವುದೇ ಮುನ್ಸೂಚನೆ ಇಲ್ಲದೆ ನೀರು ಬಿಟ್ಟು, ತುಂಬೆ ನೂತನ ವೆಂಟೆಡ್ ಡ್ಯಾಂ ಕಾಮಗಾರಿಯ ಸಲಕರಣೆಗಳು ಕೊಚ್ಚಿಹೋಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಮಳೆ ಬರುವ ನಿರೀಕ್ಷೆ ಇದ್ದರೂ, ಯಾವುದೇ ಮುಂಜಾಗರೂಕತಾ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಪ್ರಸ್ತುತ ಇಷ್ಟೊಂದು ಹಾನಿಯಾಗಿದ್ದರೂ, ಘಟನೆಯ ಬಗ್ಗೆ ಯಾವುದೇ ಇಲಾಖೆಯು ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಮಹಾನಗರಪಾಲಿಕೆ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮತ್ತು ಅಣೆಕಟ್ಟು ಸಂಸ್ಥೆಯ ಅಧಿಕಾರಿಗಳ ಜಂಟೀ ಸಭೆ ಕರೆಯಲು ಸೂಚಿಸಿದರು.
ಶಿರಾಡಿ-ಚಾರ್ಮಾಡಿ: ಶಿರಾಡಿ ಘಾಟಿ ದುರಸ್ತಿ ಬಗ್ಗೆ ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರಸ್ತುತ ಎರಡೂ ಕಡೆಗಳಲ್ಲಿ ತಲಾ 5 ಕಿ.ಮೀ. ಕಾಮಗಾರಿ ಮುಕ್ತಾಯವಾಗಿದೆ. ಇನ್ನೂ 13 ಕಿ.ಮೀ. ಕಾಮಗಾರಿ ನಡೆಯಬೇಕಿದೆ. ಮಳೆ ಕಡಿಮೆಯಾದರೆ, ಜೂನ್ 15ರೊಳಗೆ ಕಾಮಗಾರಿ ಮುಗಿಸಬಹುದು ಎಂದು ಹೆದ್ದಾರಿ ಅಧಿಕಾರಿಗಳು ತಿಳಿಸಿದರು. ಚಾರ್ಮಾಡಿ ಘಾಟಿಯಲ್ಲಿ ಮಳೆಗಾಲದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ಒಂದು ಕ್ರೇನನ್ನು ಸನ್ನದ್ಧ ಸ್ಥಿತಿಯಲ್ಲಿರಿಸುವಂತೆ ಎ.ಬಿ. ಇಬ್ರಾಹಿಂ ಸೂಚಿಸಿದರು.
ಮೆಸ್ಕಾಂ ಬಿಲ್ಲು ಆನ್ಲೈನ್ನಲ್ಲಿ ಪಾವತಿ: ವಿದ್ಯುತ್ ಬಿಲ್ಲುಗಳನ್ನು ಪಾವತಿಸಲು ಪ್ರಸ್ತುತ ಗ್ರಾಹಕರು ಕೌಂಟರ್ಗೆ ಬಂದು ಪಾವತಿಸಬೇಕಾಗಿದೆ. ಇದರಿಂದ ಗ್ರಾಹಕರು ಸಮಯವೂ ವ್ಯವವಾಗುತ್ತಿದೆ. ಇದನ್ನು ತಪ್ಪಿಸಲು ಆನ್ಲೈನ್ ಮೂಲಕ ಪಾವತಿಸುವ ಇ-ಪಾವತಿಸುವ ವ್ಯವಸ್ಥೆ ಜಾರಿಗೆ ತರುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿಗಳು, ಮೆಸ್ಕಾಂ ವೆಬ್ಸೈಟ್ನಲ್ಲಿ ವಿದ್ಯುತ್ ಬಿಲ್ಲನ್ನು ಆನ್ಲೈನ್ನಲ್ಲಿ ಪಾವತಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳ ಸಂದರ್ಭ ನೀರಿನ ಪೈಪುಗಳು ಒಡೆದು ತೀವ್ರ ಸಮಸ್ಯೆಯಾಗುತ್ತಿವೆ. ಇವುಗಳನ್ನು ದುರಸ್ಥಿಗೊಳಿಸುವುದು ಗ್ರಾಮ ಪಂಚಾಯತ್ಗಳಿಗೆ ಆರ್ಥಿಕ ಹೊರೆಯಾಗುತ್ತಿವೆ. ಈ ನಿಟ್ಟಿನಲ್ಲಿ ರಸ್ತೆ ಕಾಮಗರಿ ನಿರ್ವಹಿಸುವ ಸಂಬಂಧಪಟ್ಟ ಇಲಾಖೆಯವರೇ ಇದನ್ನು ದುರಸ್ಥಿಗೊಳಿಸಬೇಕು ಎಂದು ಕೋರಿಕೊಂಡರು. ಅಲ್ಲದೆ, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳ ದುರಸ್ಥಿ ಮತ್ತಿತರ ಸಣ್ಣಪುಟ್ಟ ಕಾಮಗಾರಿಗಳನ್ನು ನಗರಪಾಲಿಕೆ ವತಿಯಿಂದ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಡಾ.ಅಶೋಕ್, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.