ಮಂಡ್ಯದ ಅರ್ಕೇಶ್ವರ ದೇವಾಲಯದಲ್ಲಿ ಮೂವರು ಅರ್ಚಕರನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಗುಂಡಿಕ್ಕಿ ಬಂಧಿಸಿದ ಪೊಲೀಸರು
ಮಂಡ್ಯ: ಮಂಡ್ಯದ ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿ, ಹುಂಡಿಯ ಹಣ ಲೂಟಿ ಮಾಡಿದ್ದ ಆರೋಪಿಗಳನ್ನು ಕಾಲಿಗೆ ಗುಂಡಿಕ್ಕಿ ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು.. ತೀವ್ರ ಆತಂಕ ಸೃಷ್ಟಿಸಿದ್ದ ಮಂಡ್ಯದ ಅರ್ಕೇಶ್ವರ ದೇಗುಲದಲ್ಲಿ ಮೂವರು ಅರ್ಚಕರ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದು, ಪರಾರಿಯಾಗಲು ಯತ್ನಿಸಿದ ಆರೋಪಿಗಳ ಕಾಲಿಗೆ ಗುಂಡಿನ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮಂಡ್ಯ ಜಿಲ್ಲೆಯ ಮದ್ದೂರು-ಮಳವಳ್ಳಿ ರಸ್ತೆಯ ಸಾದೊಳಲು ಗೇಟ್ ಬಳಿ ಇದ್ದ ಆರೋಪಿಗಳನ್ನು ಬಂಧಿಸಲು ಹೊರಟಿದ್ದ ಪೊಲೀಸರ ಮೇಲೆ ಆರೋಪಿಗಳು ಚಾಕು, ಕಲ್ಲಿನಿಂದ ಹಲ್ಲೆ ನಡೆಸಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರಿಂದ ಗುಂಡಿನ ದಾಳಿ ನಡೆದಿದೆ. ಈ ವೇಳೆ ಗುಂಡಿನದಾಳಿಯಿಂದ ಗಾಯಗೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶದ ವಿಜಿ , ತೊಪ್ಪನಹಳ್ಳಿ ಗ್ರಾಮದ ಮಂಜ, ಅರೆಕಲ್ ದೊಡ್ಡಿ ಗ್ರಾಮದ ಗಾಂಧಿ ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಪಿ.ಎಸ್.ಐ ಸೇರಿದಂತೆ ಇಬ್ಬರು ಪೇದೆಗಳಿಗೆ ಗಾಯಗಳಾಗಿವೆ. ಗಾಯಾಳುಗಳಾದ ಅನಿಲ್ ಕುಮಾರ್ ಮತ್ತು ಕೃಷ್ಣಕುಮಾರ್ನನ್ನು ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.