ಮಂದಾರ್ತಿ ರಘು ಮಡಿವಾಳರಿಗೆ ಸುಮಕೃಷ್ಣ ಯಕ್ಷಗಾನ ಪ್ರಶಸ್ತಿ
ಮಂಗಳೂರು : ಅರೆಹೊಳೆ ಪ್ರತಿಷ್ಠಾನ ಪ್ರತೀ ವರ್ಷ ನೀಡುವ ಸುಮಕೃಷ್ಣ ಯಕ್ಷಗಾನ ಪ್ರಶಸ್ತಿಯ 2016-17ನೇ ಸಾಲಿಗಾಗಿ ಮಂದಾರ್ತಿ ಮೇಳದ ಹಿರಿಯ ಯಕ್ಷಗಾನ ಕಲಾವಿದ ಮಂದಾರ್ತಿ ರಘು ಮಡಿವಾಳ ಅವರನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದ ದಿ.ಕೃಷ್ಣ ಮೂರ್ತಿ ಭಟ್ ಬಾಳೆಗುಂಡಿ ಮತ್ತು ದಿ.ಸುಮತಿ ಕೃಷ್ಣ ಮೂರ್ತಿ ಬಾಳೆಗುಂಡಿ ಸ್ಮರಣಾರ್ಥವಾಗಿ ನೀಡಲಾಗುವ ಈ ಪ್ರಶಸ್ತಿ ಗೌರವ ಮೊತ್ತ, ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ಒಳಗೊಂಡಿದ್ದು, ಇದೇ ಏಪ್ರಿಲ್ 23ರಂದು ಹೆಬ್ರಿ-ಕೆಂಜೂರು ಸಮೀಪದ ಬಲ್ಲೆಬೈಲುವಿನ ‘ನಂದಗೋಕುಲ’ ದಲ್ಲಿ ನಡೆಯಲಿರುವ ‘ಅರೆಹೊಳೆ ದಿಬ್ಬಣ’ದ ವೇಳೆ ಪ್ರದಾನಿಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ ಹಾಗೂ ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನಿಸಲಿರುವರು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಶಿರೂರು ಅಣ್ಣಪ್ಪ ಅವರನ್ನೂ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಮಂದಾರ್ತಿ ರಘು ಮಡಿವಾಳರ ಪರಿಚಯ:-
11ನೆಯ ವಯಸ್ಸಿನಲ್ಲಿಯೇ ಉಡುಪಿಯ ಯಕ್ಷಗಾನ ಕಲಾ ಕೇಂದ್ರದಲ್ಲಿ ಮೂರು ವರ್ಷಗಳ ಕಾಲ ಯಕ್ಷಗಾನ ಅಭ್ಯಾಸ ಮಾಡಿ, ಮಂದಾರ್ತಿ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಇಡಗುಂಜಿ, ಕಮಲಶಿಲೆ, ಸೌಕೂರು, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿ ಕಳೆದ 25ವರ್ಷಗಳಿಂದ ಮಂದಾರ್ತಿ ಮೇಳದಲ್ಲಿ ಎರಡನೇ ವೇಷದಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೌರಾಣಿಕ ಪಾತ್ರಗಳಲ್ಲಿ ವಿಶೇಷ ಅಭಿನಯ ನೀಡುವ ಇವರನ್ನು ಕನ್ನಡ ಮತ್ತು ವಾರ್ತಾ ಇಲಾಖೆ, ದಿಲ್ಲಿ ಕನ್ನಡ ಸಂಘ ಹಾಗೂ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಇವರ ಯಕ್ಷಗಾನ ಕ್ಷೇತ್ರದ ಜೀವಮಾನ ಸಾಧನೆಯನ್ನು ಗುರುತಿಸಿ, ಸುಮಕೃಷ್ಣ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತಿದೆ.